ಕೊಪ್ಪಳ: ರೈತರ ಬದುಕು ಮಾನ್ಸೂನ್ನಂತೆ ಅನಿಶ್ಚಿತತೆಯಿಂದ ಕೂಡಿರುತ್ತದೆ ಎಂಬುದು ಕಟು ಸತ್ಯ. ಬೆಳೆ ಇದ್ದಾಗ ಬೆಲೆ ಇರುವುದಿಲ್ಲ, ಬೆಲೆ ಇದ್ದಾಗ ಬೆಳೆ ಇರುವುದಿಲ್ಲ. ಮುಂಗಾರು ಉತ್ತಮವಾದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮೆಣಸಿನಕಾಯಿ ಸೇರಿದಂತೆ ವಿವಿಧ ತರಕಾರಿ ಬೆಳೆದ ರೈತರು ಆ ತರಕಾರಿಗಳಿಗೆ ಬೆಲೆ ಇಲ್ಲದೇ ನಷ್ಟ ಅನುಭವಿಸುವಂತಾಗಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದ ಹಸಿ ಮೆಣಸಿನಕಾಯಿ ಈಗ ಕೇಳುವವರು ಇಲ್ಲದಂತಾಗಿದೆ.
ಹೌದು, ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಪೂರ್ವ ಹಾಗೂ ಮುಂಗಾರು ಮಳೆ ಉತ್ತಮವಾಗಿದೆ. ಮುಂಗಾರು ಮಳೆ ಉತ್ತಮವಾಗಿದ್ದರಿಂದ ರೈತರು ಅತ್ಯಂತ ಖುಷಿಯಿಂದಲೇ ಮೆಣಸಿನಕಾಯಿ ಬೆಳೆ ನಾಟಿ ಮಾಡಿದ್ದರು. ಜಿಲ್ಲೆಯಲ್ಲಿ ಸುಮಾರು 600 ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯಲಾಗಿದೆ. ಪ್ರತಿ ಹೆಕ್ಟೇರ್ಗೆ ಸುಮಾರು 25 ಟನ್ ಮೆಣಸಿನಕಾಯಿ ಇಳುವರಿ ಬರುತ್ತಿದೆ.
ಮೆಣಸಿನಕಾಯಿ ಬೆಳೆಯಲು ರೈತರು ಪ್ರತಿ ಎಕರೆಗೆ ಸುಮಾರು 20 ಸಾವಿರ ರೂಪಾಯಿಗೂ ಅಧಿಕ ಹಣ ಖರ್ಚು ಮಾಡಿದ್ದಾರೆ. ಆದರೆ, ಮಾರುಕಟ್ಟೆಯಲ್ಲಿ ಈಗ ಮೆಣಸಿನಕಾಯಿ ಬೆಲೆ ಸಂಪೂರ್ಣವಾಗಿ ಕುಸಿತ ಕಂಡಿದೆ. ಕೊಪ್ಪಳ, ಕನಕಗಿರಿ, ಕುಷ್ಟಗಿ ಹಾಗೂ ಗಂಗಾವತಿ ಸೇರಿದಂತೆ ಸುತ್ತಮುತ್ತಲಿನ ಮಾರುಕಟ್ಟೆಗೆ ಹೋದರೆ ಪ್ರತಿ ಕ್ವಿಂಟಾಲ್ ಹಸಿ ಮೆಣಸಿನಕಾಯಿಗೆ ಕೇವಲ 600 ರೂಪಾಯಿಗಿಂತ ಕಡಿಮೆ ದರಕ್ಕೆ ಕೇಳುತ್ತಿದ್ದಾರೆ.
ಮೆಣಸಿನಕಾಯಿ ಕಟಾವು ಮಾಡಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗಲು ಖರ್ಚು ಮಾಡುವ ಹಣವೂ ಸಹ ರೈತರಿಗೆ ಸಿಗುತ್ತಿಲ್ಲ. ಇಲ್ಲಿ ರೈತರಿಗಿಂತ ಮಧ್ಯವರ್ತಿಗಳಿಗೆ ಹೆಚ್ಚಿನ ಲಾಭವಾಗುತ್ತಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ರೈತರಿಂದ ಕ್ವಿಂಟಾಲ್ಗೆ 600 ರೂಪಾಯಿಗಿಂತ ಕಡಿಮೆ ದರಕ್ಕೆ ಖರೀದಿಸಿ, ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ವ್ಯಾಪಾರಿಗಳು ಪ್ರತಿ ಕೆಜಿಗೆ 30 ರೂಪಾಯಿಗಿಂತ ಅಧಿಕ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ದುಬಾರಿಯಾಗಿ ಮಾರಾಟ ಮಾಡುತ್ತಿರುವ ಬಗ್ಗೆ ತರಕಾರಿ ವ್ಯಾಪಾರಿಗಳನ್ನು ಕೇಳಿದರೆ ಸಾಗಣೆ ವೆಚ್ಚ ಸೇರಿದರೆ ನಮಗೂ ಲಾಭವಾಗುವುದಿಲ್ಲ. ಕಡಿಮೆ ದರವಿದ್ದಾಗ ನಾವು ಕಡಿಮೆ ದರಕ್ಕೆ ಮಾರಾಟ ಮಾಡುತ್ತೇವೆ ಎನ್ನುತ್ತಾರೆ.