ಕೊಪ್ಪಳ: ನ. 17ರಿಂದ ಕಾಲೇಜು ಆರಂಭಿಸಲು ಸರ್ಕಾರ ನಿರ್ಧರಿಸಿದ್ದು, ಈ ವಿಷಯದಲ್ಲಿ ಸರ್ಕಾರ ಅವಸರ ಮಾಡಬಾರದು ಎಂದು ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಹೇಳಿದ್ದಾರೆ.
ಕೊಪ್ಪಳದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೊನಾ ಭೀತಿ ಇದೆ. ಪ್ರತಿದಿನ 5 ಸಾವಿರದಷ್ಟು ಕೊರೊನಾ ಪಾಸಿಟಿವ್ ಕೇಸ್ಗಳು ಪತ್ತೆಯಾಗುತ್ತಿವೆ. ಇದನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು. ಕಾಲೇಜುಗಳ ಆರಂಭದ ಬಗ್ಗೆ ವಿರೋಧ ಪಕ್ಷದ ಅಭಿಪ್ರಾಯ ತೆಗೆದುಕೊಳ್ಳಬೇಕು. ಶಿಕ್ಷಣ ಸಚಿವರು ಹಾಗೂ ಆರೋಗ್ಯ ತಜ್ಞರ ಅಭಿಪ್ರಾಯ ಪಡೆಯಬೇಕು. ಗಂಡಾಂತರ ತರುವ ಯಾವುದೇ ನಿರ್ಣಯವನ್ನು ಸರ್ಕಾರ ಕೈಗೊಳ್ಳಬಾರದು. ಕಾಲೇಜು ಆರಂಭದ ಕುರಿತಂತೆ ಸಿದ್ದರಾಮಯ್ಯ ಸೇರಿದಂತೆ ವಿರೋಧ ಪಕ್ಷಗಳ ಇತರ ನಾಯಕರ ಜೊತೆಗೆ ಸರ್ಕಾರ ಚರ್ಚೆ ಮಾಡಿ ಬಳಿಕ ನಿರ್ಧಾರ ತೆಗೆದುಕೊಳ್ಳುವಂತೆ ಅವರು ಸಲಹೆ ನೀಡಿದರು.
ಇನ್ನು ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವೆ ಸಿಎಂ ಸ್ಥಾನಕ್ಕೆ ಪೈಪೋಟಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಚುನಾವಣೆಯಾಗಿ ಕಾಂಗ್ರೆಸ್ಗೆ ಬಹುಮತ ಬಂದರೆ ಆ ಮಾತಿಗೆ ಅರ್ಥವಿರುತ್ತದೆ. ಮುಂಚಿತವಾಗಿ ಹರಟೆಗೆ ಮಾತನಾಡುತ್ತಿರುತ್ತಾರೆ. ಅನವಶ್ಯಕವಾಗಿ ಮಾತನಾಡಬಾರದು ಎಂದರು. ಇದೇ ವೇಳೆ ಉತ್ತರ ಕರ್ನಾಟಕದವರು ಮುಂದಿನ ಸಿಎಂ ಎಂದು ಯತ್ನಾಳ್ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿ, ಅವರ ಪಕ್ಷದ ಬಡಿದಾಟಕ್ಕೆ ಏನಾದರೂ ಹೇಳುತ್ತಾರೆ. ಸಿಎಂ ಸ್ಥಾನ ಖಾಲಿ ಇಲ್ಲ. ಈಗ ಅದರ ಬಗ್ಗೆ ಮಾತನಾಡಿದರೆ ಅಪ್ರಸ್ತುತ ಎಂದರು.