ಕೊಪ್ಪಳ: ಲಾಕ್ಡೌನ್ ಸಂದರ್ಭದಲ್ಲಿ ನೋಂದಾಯಿತ ಕಾರ್ಮಿಕರಿಗೆ ನೆರವಾಗಲು ಸರ್ಕಾರ ಪ್ಯಾಕೇಜ್ ಘೋಷಣೆ ಮಾಡಿತ್ತು. ನೋಂದಾಯಿತ ಕಾರ್ಮಿಕರಿಗೆ ಮೊದಲ ಹಂತವಾಗಿ 2000 ರೂಪಾಯಿ ನೀಡುತ್ತಿದೆ. ಆದರೆ, ಕೊಪ್ಪಳದಲ್ಲಿ ನೂರಾರು ಕಾರ್ಮಿಕರಿಗೆ ಈ ಹಣ ಇನ್ನೂ ಸಿಕ್ಕಿಲ್ಲ. ಇದರಿಂದಾಗಿ ಕಟ್ಟಡ ಕಾರ್ಮಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ತಾಲೂಕಿನ ಬಹದ್ದೂರಬಂಡಿ ಗ್ರಾಮವೊಂದರಲ್ಲಿಯೇ ಸುಮಾರು 450 ಜನ ನೋಂದಾಯಿತ ಕಟ್ಟಡ ಕಾರ್ಮಿಕರು ಇದ್ದಾರೆ. ಈ ಪೈಕಿ ಸುಮಾರು 50 ಜನರಿಗೆ ಮಾತ್ರ ಮೊದಲ ಹಂತದ 2000 ರೂಪಾಯಿ ಹಣ ಬಂದಿದೆ. ಆದರೆ, ಇನ್ನುಳಿದ 400 ಜನರ ಖಾತೆಗೆ ಹಣ ಬಂದಿಲ್ಲ. ತಮಗೆ ಹಣ ಬಾರದೇ ಇರುವ ಕುರಿತಂತೆ ಕಾರ್ಮಿಕ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆ. ಆದರೆ ಅಧಿಕಾರಿಗಳು ಸಬೂಬು ಹೇಳಿ ಕಳುಹಿಸುತ್ತಿದ್ದಾರೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ.
ಕೊರೊನಾ ಭೀತಿ ಹಿನ್ನೆಲೆಯಲ್ಲಿ ಲಾಕ್ಡೌನ್ ಆಗಿದ್ದರಿಂದ ನಾವು ಸಂಕಷ್ಟಕ್ಕೆ ಸಿಲುಕಿದ್ದೇವೆ. ಈಗಾಗಲೇ ನಾವು ನಾಲ್ಕೈದು ವರ್ಷಗಳ ಹಿಂದೆಯೇ ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡಿದ್ದೇವೆ. ಬೇರೆ ಕಾರ್ಮಿಕರಿಗೆ ಹಣ ಬಂದಿದೆ. ನಮಗೆ ಮಾತ್ರ ಬಂದಿಲ್ಲ. ಆದ್ದರಿಂದ ಆಗಿರುವ ಲೋಪದೋಷಗಳನ್ನು ಸರಿಪಡಿಸಿ ನಮಗೆ ಸಹಾಯ ಮಾಡಬೇಕು ಎಂದು ಕಾರ್ಮಿಕರು ಮನವಿ ಮಾಡಿದ್ದಾರೆ.