ಕೊಪ್ಪಳ : ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಿಸಲು ಮಹಿಳಾ ಕಾಯಕೋತ್ಸವ ಜಾರಿ ಮಾಡಲಾಗಿದೆ.
ಜಿಲ್ಲೆಯ ಕಾರಟಗಿ ತಾಲೂಕಿನ ಮೈಲಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಹಿಳಾ ಕಾಯಕೋತ್ಸವ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಿಸಲು ಮಹಿಳಾ ಕಾಯಕೋತ್ಸವ ಎಂಬ ಯೋಜನೆ ಜಾರಿಗೆ ತರಲಾಗಿದೆ.
ಇದರಿಂದಾಗಿ ಮಹಿಳೆಯರು ಸಹ ಕೂಲಿ ಕೆಲಸಕ್ಕಾಗಿ ದೂರದ ಊರಿಗೆ ಗುಳೆ ಹೋಗುವುದು ತಪ್ಪಿದೆ. ತಮ್ಮ ಊರಿನಲ್ಲೇ ಮಹಿಳೆಯರಿಗೆ ಕೆಲಸ ಕೊಡುತ್ತಿರುವುದರಿಂದ ಬಹಳ ಖುಷಿಯಾಗಿದೆ ಅಂತಾರೆ ಇಲ್ಲಿನ ಮಹಿಳಾ ಕೂಲಿ ಕಾರ್ಮಿಕರು.
ನೂತನ ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರ ಸಹಾಯದಿಂದ ಗ್ರಾಮದಲ್ಲಿ ಮಹಿಳಾ ಕಾಯಕೋತ್ಸವದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಮಾಡಲಾಗಿದೆ. ಈ ಕಾರಣದಿಂದಾಗಿಯೇ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡಿದ್ದಾರೆ.
ಮೊದಲ ಹಂತದಲ್ಲೇ ಮೈಲಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 1,483 ಮಹಿಳೆಯರು ಭಾಗವಹಿಸಿದ್ದಾರೆ. ಮಹಿಳೆಯರು ಸ್ಥಳೀಯ ಗ್ರಾಮ ಪಂಚಾಯತ್ಗಳಿಗೆ ಭೇಟಿ ನೀಡಿ, ಉದ್ಯೋಗ ಖಾತ್ರಿ ಚೀಟಿ ಪಡೆದುಕೊಂಡು ಕೆಲಸಕ್ಕೆ ಹಾಜರಾಗಲು ಇದೊಂದು ಸದವಕಾಶವಾಗಿದೆ.
ಈ ಸುದ್ದಿಯನ್ನೂ ಓದಿ: ಮೀಸಲಾತಿ ಘೋಷಣೆಯಾಗದಿದ್ರೆ ಮುಂದಿನ ಹೋರಾಟಕ್ಕೆ ಜನಾಭಿಪ್ರಾಯ ಸಂಗ್ರಹ : ಪ್ರಸನ್ನಾನಂದ ಪುರಿ ಶ್ರೀ
ಉದ್ಯೋಗ ಖಾತ್ರಿಯಲ್ಲಿ ವರ್ಷಕ್ಕೆ 100 ದಿನ ಕೆಲಸ ಮಾಡಿ ದಿನವೊಂದಕ್ಕೆ 275 ರೂ. ಕೂಲಿ ಪಡೆಯಬಹುದಾಗಿದೆ. ಹೀಗಾಗಿ, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಕೆಲಸದಲ್ಲಿ ಪಾಲ್ಗೊಳ್ಳುವಂತೆ ಮೈಲಾಪುರ ಗ್ರಾಮ ಪಂಚಾಯತ್ ಪಿಡಿಒ ಮಲ್ಲಿಕಾರ್ಜುನ ಕಡಿವಾಲರ್ ಸಲಹೆ ನೀಡಿದ್ದಾರೆ.