ಗಂಗಾವತಿ: ಈ ಹಿಂದಿನ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿದ್ದ ಕಾಂಗ್ರೆಸ್ ಸರ್ಕಾರದಲ್ಲಿ ವೀರಶೈವ ಸಮುದಾಯವನ್ನು ವಿಭಜಿಸುವ ಸಂದರ್ಭದಲ್ಲಿ ವಿರೋಧ ವ್ಯಕ್ತಪಡಿಸಿದ್ದ ಯಡಿಯೂರಪ್ಪ, ಇದೀಗ ಅತ್ಯಂತ ನಮ್ಮ ಚಿಕ್ಕ ಸಮುದಾಯವನ್ನು ವಿಭಜಿಸುವ ಹುನ್ನಾರ ನಡೆಸಿದ್ದಾರೆ ಎಂದು ಗೊಲ್ಲ ಸಮುದಾಯ ತಾಲ್ಲೂಕು ಅಧ್ಯಕ್ಷ ಪ್ರಣವಾನಂದ ಆರೋಪಿಸಿದ್ದಾರೆ.
ಕಾಡುಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸಿದ ಸರ್ಕಾರದ ಕ್ರಮ ಖಂಡಿಸಿ ನಗರದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದ ಸಮುದಾಯದ ಪ್ರಮುಖರು, ಬಳಿಕ ತಹಶೀಲ್ದಾರ್ ಕಚೇರಿಗೆ ತೆರಳಿ ಉಪ ತಹಶೀಲ್ದಾರ್ ಮಂಜುನಾಥ ಅವರಿಗೆ ಮನವಿ ಸಲ್ಲಿಸಿ ಸರ್ಕಾರಕ್ಕೆ ತಲುಪಿಸುವಂತೆ ಮನವಿ ಮಾಡಿದರು.
ಗೊಲ್ಲ ಸಮುದಾಯದಲ್ಲಿ 34 ಒಳ ಪಂಗಡಗಳಿದ್ದು, ಯಾವ ಉಪ ಪಂಗಡದ ಅಸ್ತಿತ್ವಕ್ಕೆ ಧಕ್ಕೆಯಾಗದಂತೆ ಅಖಿಲ ಕರ್ನಾಟಕ ಸಮಗ್ರ ಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಒತ್ತಾಯಿಸಿ ಸಮುದಾಯ ಮುಖಂಡರು ನಗರದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಆಗ್ರಹಿಸಿದರು.
ಈ ಬಗ್ಗೆ ಮಾತನಾಡಿದ ಅಧ್ಯಕ್ಷ ಪ್ರಣವಾನಂದ, ಕಳೆದ ಆರು ತಿಂಗಳ ಹಿಂದೆಯೇ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದೇವೆ. ಆಗ ಸಕಾರಾತ್ಮಕವಾಗಿಯೇ ಸ್ಪಂದಿಸಿದ ಸಿಎಂ ಇಂದು ಬರಿ 'ಕಾಡುಗೊಲ್ಲ' ಅಭಿವೃದ್ಧಿ ನಿಗಮ ಸ್ಥಾಪಿಸಿರುವುದು ಸರಿಯಲ್ಲ. ನಮ್ಮ ಸಮುದಾಯ ವಿಭಜನೆಗೆ ಕೈಹಾಕಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.