ಗಂಗಾವತಿ: ತಾಲೂಕಿನ ಆನೆಗೊಂದಿ ಸಮೀಪ ಇರುವ ಮೇಗೋಟೆಯ ಆದಿಶಕ್ತಿ ದುರ್ಗಾದೇವಿ ದೇವಸ್ಥಾನದ ಸುತ್ತಲೂ ಚಿರತೆ ಹಾವಳಿ ಹೆಚ್ಚಾಗಿದೆ. ಈ ಹಿನ್ನೆಲೆ ಸಾರ್ವಜನಿಕರು ದೇವಸ್ಥಾನದ ಬಳಿ ಬಾರದಂತೆ ಎಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಬೇಕು ಎಂದು ತಹಶೀಲ್ದಾರ್ಗೆ ಅರಣ್ಯ ಇಲಾಖೆ ಪತ್ರ ಬರೆದಿದೆ.
ದೇವಸ್ಥಾನದ ಆವರಣದಲ್ಲಿದ್ದ ಅಡುಗೆ ಭಟ್ಟನ ಮೇಲೆ ಚಿರತೆ ದಾಳಿ ಮಾಡಿ ಆತನ ಸಾವಿಗೆ ಕಾರಣವಾದ ಹಿನ್ನೆಲೆ ಎಚ್ಚೆತ್ತ ಅರಣ್ಯ ಇಲಾಖೆಯ ಆರ್ಎಫ್ಒ ಶಿವರಾಜ ಮೇಟಿ ಇದೀಗ ತಹಶೀಲ್ದಾರ್ ರೇಣುಕಾ ಅವರಿಗೆ ಪತ್ರ ಬರೆದು ದೇವಸ್ಥಾನಕ್ಕೆ ಸಾರ್ವಜನಿಕ ಪ್ರವೇಶ ನಿರ್ಬಂಧಿಸುವಂತೆ ಕೋರಿದ್ದಾರೆ.
ಅಡುಗೆ ಭಟ್ಟನ ಹೊತ್ತೊಯ್ದು ತಿಂದಾಕಿದ ಚಿರತೆ: ಬೆಚ್ಚಿಬಿದ್ದ ಆನೆಗೊಂದಿ ಜನತೆ!
ಕಳೆದ ಒಂದು ತಿಂಗಳಿನಿಂದ ದುರ್ಗಾಬೆಟ್ಟದಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿವೆ. ವನ್ಯಪ್ರಾಣಿಗಳ ದಾಳಿಯಿಂದ ನಾಗರಿಕರನ್ನು ರಕ್ಷಿಸಲು ದೇಗುಲಕ್ಕೆ ಬರುವ ಭಕ್ತರನ್ನು ನಿರ್ಬಂಧಿಸುವುದು ಅಗತ್ಯವಿದ್ದು, ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಅರಣ್ಯಾಧಿಕಾರಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಮೃತನ ನಿವಾಸಕ್ಕೆ ಕಾಂಗ್ರೆಸ್ ಮುಖಂಡರ ನಿಯೋಗ ಭೇಟಿ:
ಮೊನ್ನೆ ರಾತ್ರಿ ಚಿರತೆ ದಾಳಿಯಿಂದ ಸಾವನ್ನಪ್ಪಿದ ಅಡುಗೆ ಭಟ್ಟ ಹುಲುಗೇಶ ಈರಪ್ಪ ಮಡ್ಡೇರ ನಿವಾಸಕ್ಕೆ ಕಾಂಗ್ರೆಸ್ ಮುಖಂಡರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ಘಟನೆಗೆ ಅರಣ್ಯ ಇಲಾಖೆಯ ನಿರ್ಲಕ್ಷ್ಯತನವೇ ಕಾರಣವೆಂದು ಆರೋಪಿಸಿದರು. ಕೂಡಲೇ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಇಲಾಖೆಯ ಮೇಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಹಿಂದೆ ಎರಡು ಬಾರಿ ಚಿರತೆ ಪ್ರತ್ಯಕ್ಷವಾಗಿತ್ತು. ಕಾಟಾಚಾರಕ್ಕೆ ಎಂಬಂತೆ ಚಿರತೆ ಹಿಡಿಲು ಬೋನಿಟ್ಟು ಒಂದು ಚಿರತೆ ಸೆರೆ ಸಿಕ್ಕ ಬಳಿಕ ಕಾರ್ಯಾಚರಣೆ ಸ್ಥಗಿತಗೊಳಿಸಿದರು. ಹಾಗಾಗಿಯೇ ಇದೀಗ ಓರ್ವನ ಬಲಿಯಾಗಿದೆ. ಬೆಟ್ಟದಲ್ಲಿ ಸಾಕಷ್ಟು ಚಿರತೆ, ಕರಡಿಗಳಿದ್ದು, ಜನ ಸಂಚಾರಕ್ಕೆ ಸಮಸ್ಯೆಯಾಗಿದೆ. ಈ ಹಿನ್ನೆಲೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಪಕ್ಷದ ನಗರ, ಗ್ರಾಮೀಣ ಹಾಗೂ ಯುವ ಘಟಕದ ಪದಾಧಿಕಾರಿಗಳು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಒತ್ತಾಯಿಸಿದರು.