ಗಂಗಾವತಿ: ನಗರದ ಹೊರ ವಲಯದಲ್ಲಿರುವ ಕೃಷಿ ವಿಜ್ಞಾನ ಹಾಗೂ ಸಂಶೋಧನಾ ಕೇಂದ್ರದ ಆವರಣದಲ್ಲಿ ಇದೇ ಶೈಕ್ಷಣಿಕ ವರ್ಷದಿಂದ ಆರಂಭವಾಗುತ್ತಿರುವ ಕೃಷಿ ಕಾಲೇಜಿಗೆ ಆಡಳಿತಾತ್ಮಕ ಅನುಮೋದನೆ ನೀಡಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಈ ಭಾಗದ ಜನರ ಬಹು ದಿನಗಳ ಬೇಡಿಕೆಯಾಗಿದ್ದ ಕೃಷಿ ಕಾಲೇಜು ಆರಂಭಕ್ಕೆ ಸಾಕಷ್ಟು ಒತ್ತಡಗಳಿದ್ದ ಹಿನ್ನೆಲೆ ಕಳೆದ ತಿಂಗಳು ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ 30 ಸೀಟುಗಳನ್ನು ಮೀಸಲಿಟ್ಟು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೀಟು ಹಂಚಿಕೆ ಮಾಡಿತ್ತು. ಬಳಿಕ ಎದುರಾದ ಸ್ಥಳೀಯ ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದ ಕಾರಣ ಸರ್ಕಾರ ಅಧಿಕೃತ ಆಡಳಿತಾತ್ಮಕ ಅನುಮೋದನೆ ನೀಡಿರಲಿಲ್ಲ. ಆದರೆ ಈಗ ಕೃಷಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಜೋನ್ ಪ್ರಕಾಶ್ ರೋಡಿಗ್ರಸ್ ಅಧಿಕೃತ ಆದೇಶ ಹೊರಡಿಸಿದ್ದಾರೆ.
ಈ ಬಗ್ಗೆ 'ಈಟಿವಿ ಭಾರತ'ಕ್ಕೆ ಪ್ರತಿಕ್ರಿಯೆ ನೀಡಿರುವ ರಾಯಚೂರು ಕೃಷಿ ಮಹಾವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯ ಜಿ. ಶ್ರೀಧರ, ಸರ್ಕಾರಕ್ಕೆ ಮುಂದಿನ ಎರಡು ವರ್ಷ ಅನುದಾನ ಮತ್ತು ಸಿಬ್ಬಂದಿ ನಿಯೋಜನೆ ಸೇರಿದಂತೆ ಯಾವುದೇ ಆರ್ಥಿಕ ಭಾರವಾಗದಂತೆ ಸ್ಥಳೀಯ ಸಂಪನ್ಮೂಲ ಕ್ರೋಢೀಕರಣ ಮಾಡಿಕೊಂಡು ಕಾಲೇಜು ಆರಂಭಿಸಲಾಗುತ್ತಿದೆ ಎಂದರು.