ಗಂಗಾವತಿ: ನಿಷೇಧದ ಬಳಿಕವೂ ನಗರದಲ್ಲಿ ಅವ್ಯಾಹತವಾಗಿ ಚಾಲ್ತಿಯಲ್ಲಿರುವ ಪ್ಲಾಸ್ಟಿಕ್ ಬಳಕೆಯ ಬಗ್ಗೆ ಕೆಲ ಪ್ರಜ್ಞಾವಂತರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ನಗರಸಭೆಯ ಅಧಿಕಾರಿಗಳು ನಗರದ ವಿವಿಧೆಡೆ ದಾಳಿ ಮಾಡಿ, ಸುಮಾರು ನೂರು ಕೆ.ಜಿ ಪ್ಲಾಸ್ಟಿಕ್ ವಶಪಡಿಸಿಕೊಂಡಿದ್ದಾರೆ.
ಜುಲಾಯಿ ನಗರದಲ್ಲಿರುವ ಸನ್ಮಾನ ಲಾಡ್ಜ್ಗೆ ದಾಳಿ ಮಾಡಿದ ಅಧಿಕಾರಿಗಳು ಮದ್ಯಪಾನಕ್ಕೆ ಬಳಸಲು ಉಪಯೋಗಿಸಲಾಗುತ್ತಿದ್ದ ಪ್ಲಾಸ್ಟಿಕ್ ಗ್ಲಾಸ್ ವಶಕ್ಕೆ ಪಡೆದರು. ಬಳಿಕ ಅದೇ ವಾಣಿಜ್ಯ ಸಂಕೀರ್ಣದ ಅಂಗಡಿ-ಮುಂಗಟ್ಟುಗಳ ಮೇಲೆ ದಾಳಿ ಮಾಡಿದರು. ನಂತರ ಗಾಂಧಿವೃತ್ತದ ಫ್ಯಾನ್ಸಿಸ್ಟೋರ್, ಮಟನ್ ಮಾರ್ಕೆಟ್, ಕಿಲ್ಲಾ ಏರಿಯಾದ ಬೆಂಗಳೂರು ಬೇಕರಿ ಮೊದಲಾದ ಅಂಗಡಿಗಳ ಮೇಲೆ ಅಧಿಕಾರಿಗಳು ದಾಳಿ ಮಾಡಿ, ಪ್ಲಾಸ್ಟಿಕ್ ವಶಕ್ಕೆ ಪಡೆದರು.
ನೈರ್ಮಲ್ಯ ಇಂಜಿನಿಯರ್ ನೇತ್ರಾವತಿ, ಆರೋಗ್ಯ ನಿರೀಕ್ಷಕರಾದ ಸ್ವಾತಿ ಹಾಗೂ ನಾಗರಾಜ್ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.