ಗಂಗಾವತಿ: ನಗರದ ಈದ್ಗಾ ಕಾಲೋನಿಯಲ್ಲಿರುವ ಈಶ್ವರ ಸಿಂಗ್ ಎಂಬುವರ ಕುಟುಂಬ ಲಾಕ್‌ಡೌನ್‌ನಿಂದ ಪರದಾಡುತ್ತಿರುವ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಭೇಟಿ ನೀಡಿದ ಕ್ಷತ್ರಿಯ ಒಕ್ಕೂಟದ ಮುಖಂಡರು, ನೆರವಿನ ಹಸ್ತ ಚಾಚಿದ್ದಾರೆ.
ಈ ಬಗ್ಗೆ ಈಟಿವಿ ಭಾರತದಲ್ಲಿ ಸುದ್ದಿ ಪ್ರಸಾರವಾಗಿದ್ದನ್ನು ಗಮನಿಸಿದ ಕೆಲ ಯುವಕರು, ಸಮಾಜದ ಮುಖಂಡರ ಗಮನಕ್ಕೆ ತಂದಿದ್ದಾರೆ. ಕೂಡಲೇ ಸ್ಪಂದಿಸಿದ ಸಮುದಾಯ ಮುಖಂಡರು, ಸಂತ್ರಸ್ತ ಕುಟುಂಬವನ್ನು ಭೇಟಿಯಾಗಿ ನೆರವು ನೀಡಿದರು.
ಒಂದು ತಿಂಗಳಿಗೆ ಆಗುವಷ್ಟು ಆಹಾರಧಾನ್ಯ, ಸಕ್ಕರೆ, ಹೃದಯ ಕಾಯಿಲೆಯಿಂದ ಬಳಲುತ್ತಿರುವ ಕುಟುಂಬ ಸದಸ್ಯರಿಗೆ ಔಷಧಿ ಮೊದಲಾದವುಗಳನ್ನು ವಿತರಿಸಲಾಯಿತು. ಲಾಕ್‌ಡೌನ್ ಬಳಿಕ ಮಕ್ಕಳಿಗೆ ಎಲ್ಲಾದರೂ ತಾತ್ಕಾಲಿಕ ಉದ್ಯೋಗ ಕೊಡಿಸುವ ಭರವಸೆ ನೀಡಿದರು.
ಸಮಾಜದ ನಗರಸಭಾ ಸದಸ್ಯರಿಂದ ಸಾಧ್ಯವಾದಷ್ಟು ಸಹಾಯ ಮಾಡಿಸುವುದಾಗಿ ಮುಖಂಡರು ಈ ಸಂದರ್ಭದಲ್ಲಿ ಸಂತ್ರಸ್ತ ಕುಟುಂಬಕ್ಕೆ ಭರವಸೆ ನೀಡಿದರು.