ಗಂಗಾವತಿ: ಜನ ಒಂಟಿಯಾಗಿ ಅನಗತ್ಯ ಕಾರಣಗಳಿಗೆ ಓಡಾಡಬಾರದು. ಹಾಗೊಂದು ಸಂದರ್ಭ ಒಂಟಿಯಾಗಿ ಓಡಾಡುವ ಸನ್ನಿವೇಶ ನಿರ್ಮಾಣವಾದರೆ ಆಯುಧಗಳನ್ನು ಜೊತೆಗೆ ಒಯ್ಯಿರಿ. ಇದು ಬಿಟ್ಟರೆ ಸದ್ಯಕ್ಕೆ ಜಿಲ್ಲಾಡಳಿತದ ಬಳಿ ಬೇರೆ ಪರಿಹಾರ ಇಲ್ಲ ಎಂದು ಕೊಪ್ಪಳ ಜಿಲ್ಲಾಧಿಕಾರಿ ವಿಕಾಶ್ ಕಿಶೋರ್ ಸುರಾಳ್ಕರ್ ಜನರಿಗೆ ಕರೆ ನೀಡಿದ್ದಾರೆ.
ತಾಲೂಕಿನ ಆನೆಗೊಂದಿ ಪ್ರದೇಶದಲ್ಲಿ ಕಳೆದ ಒಂದು ತಿಂಗಳಿಂದ ವಿಪರೀತವಾಗಿರುವ ಚಿರತೆ ಹಾವಳಿಯಿಂದ ಜನ ತತ್ತರಿಸಿ ಹೋಗಿರುವ ಹಿನ್ನೆಲೆ ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿದ್ದರು. ಸ್ಥಳೀಯರ ಒತ್ತಾಯದ ಮೇರೆಗೆ ಶಾಸಕ ಪರಣ್ಣ ಮುನವಳ್ಳಿ ನೇತೃತ್ವದಲ್ಲಿ ದುರ್ಗಾಬೆಟ್ಟದಲ್ಲಿ ಅರಣ್ಯಾಧಿಕಾರಿ, ಕಂದಾಯ ಇಲಾಖೆ ಅಧಿಕಾರಿಗಳು ಸಭೆ ನಡೆಸಿದರು. ಜಿಲ್ಲಾಧಿಕಾರಿ ಸಭೆಯಲ್ಲಿ ಕೂಡಲೇ ಚಿರತೆ ಸೆರೆಗೆ ಕಾರ್ಯಾಚರಣೆ ತೀವ್ರಗೊಳಿಸುವಂತೆ ಸೂಚನೆ ನೀಡಿದರು.
ಬಳಿಕ ಜನರ ಅಹವಾಲು ಆಲಿಸಿದ ಜಿಲ್ಲಾಧಿಕಾರಿ, ಸದ್ಯಕ್ಕೆ ಒಂಟಿಯಾಗಿ ಓಡಾಡಬೇಡಿ. ಓಡಾಡುವಾಗ ಗುಂಪಾಗಿ ಇರಿ. ಸಾಧ್ಯವಾದಷ್ಟು ಆಯುಧಗಳನ್ನು ಜೊತೆಗೆ ಇರಿಸಿಕೊಂಡಿರಿ ಎಂದರು. ತಾತ್ಕಾಲಿಕವಾಗಿ ಬೆಟ್ಟದ ಪರಿಸರದಲ್ಲಿರುವ ಎಲ್ಲಾ ದೇಗುಲಗಳಿಗೆ ಭಕ್ತರ ಪ್ರವೇಶ ಸ್ಥಗಿತಗೊಳಿಸುವಂತೆ ಡಿಸಿ, ತಹಶೀಲ್ದಾರ್ ರೇಣುಕಾ ಅವರಿಗೆ ಸೂಚನೆ ನೀಡಿದರು.