ಗಂಗಾವತಿ: ನಗರದ ನಾನಾ ಭಾಗದಲ್ಲಿ ನಗರಸಭೆಯ ಅನುಮತಿ ಪಡೆದುಕೊಳ್ಳದೇ ತೆರಿಗೆ ವಂಚಿಸಿ ನಾನಾ ದೂರವಾಣಿ ಕಂಪನಿಗಳು ಮೊಬೈಲ್ ಟವರ್ ನಿರ್ಮಾಣ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿವೆ. ಸಾರ್ವಜನಿಕರಿಂದ ಆಕ್ಷೇಪಣೆಗಳು ವ್ಯಕ್ತವಾದರೂ ನಗರಸಭೆಯ ಅಧಿಕಾರಿಗಳು ಕ್ರಮಕ್ಕೆ ಮುಂದಾಗುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.
ಈಗಾಗಲೇ ಶರಣಬಸವೇಶ್ವರ ಕ್ಯಾಂಪ್, ಅಂಬೇಡ್ಕರ್ ನಗರ ಮತ್ತು ನಗರದ ಹೃದಯ ಭಾಗವಾದ ಗಾಂಧಿವೃತ್ತದಲ್ಲಿ ಖಾಸಗಿ ದೂರವಾಣಿ ಸಂಸ್ಥೆಗಳು ಖಾಸಗಿ ವ್ಯಕ್ತಿಗಳ ಜೊತೆ ಒಪ್ಪಂದ ಮಾಡಿಕೊಂಡು, ಟವರ್ ಅಳವಡಿಕೆ ಕಾರ್ಯಕ್ಕೆ ಮುಂದಾಗಿವೆ. ನಗರಸಭೆಯಿಂದ ಯಾವುದೇ ಅನುಮತಿ ಪಡೆದುಕೊಂಡಿಲ್ಲ. ಅಲ್ಲದೇ ನಗರಸಭೆಗೆ ತೆರಿಗೆ ಪಾವತಿಸಿಲ್ಲ ಎನ್ನಲಾಗ್ತಿದ್ದು, ಖಾಸಗಿ ವ್ಯಕ್ತಿಗಳ ಸ್ಥಳ, ನಿವೇಶನ ಮತ್ತು ಕಟ್ಟಡದ ಮೇಲೆ ನಿರ್ಮಾಾಣವಾಗುತ್ತಿರುವ ಟವರ್ಗಳಿಗೆ ಮಾಸಿಕ 60 ರಿಂದ 80 ಸಾವಿರ ರೂಪಾಯಿ ಬಾಡಿಗೆ ನೀಡುವ ಒಪ್ಪಂದ ಮಾಡಿಕೊಂಡಿವೆ ಎನ್ನಲಾಗ್ತಿದೆ.
ಓದಿ:ಕಲ್ಲು ಗಣಿಗಾರಿಕಾ ಪ್ರದೇಶಗಳಿಗೆ ತೆರಳಿ ಖುದ್ದು ಪರಿಶೀಲನೆ ಮಾಡಿದ್ದೇನೆ: ಜಿಲ್ಲಾಧಿಕಾರಿ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಗರಭೆಯ ಪೌರಾಯುಕ್ತ ಅರವಿಂದ್ ಜಮಖಂಡಿ, ನಗರದ ನಾನಾ ಭಾಗದಲ್ಲಿ ಟವರ್ ನಿರ್ಮಾಣವಾಗುತ್ತಿರುವುದು ಗಮನಕ್ಕೆ ಬಂದಿದೆ. ಯಾರೂ ಇದುವರೆಗೂ ಅಧಿಕೃತವಾಗಿ ನಗರಸಭೆಯಿಂದ ಅನುಮತಿ ಪಡೆದುಕೊಂಡಿಲ್ಲ. ಈ ಹಿನ್ನೆಲೆ ತಕ್ಷಣ ಕಾಮಗಾರಿ ಸ್ಥಗಿತ ಮಾಡುವಂತೆ ನಮ್ಮ ಸಿಬ್ಬಂದಿಗೆ ನೋಟಿಸ್ ನೀಡಲಾಗಿದೆ. ಎಲ್ಲಾ ಮಾನದಂಡದಂತೆ ಟವರ್ ನಿರ್ಮಾಣವಾದರೂ ವಾರ್ಷಿಕ 35 ಸಾವಿರ ರೂಪಾಯಿ ನಗರಸಭೆಗೆ ತೆರಿಗೆ ಪಾವತಿಸಬೇಕಿದೆ. ಈ ಬಗ್ಗೆ ತಕ್ಷಣ ಗಮನ ಹರಿಸಲಾಗುವುದು ಎಂದು ಪೌರಾಯುಕ್ತ ಅರವಿಂದ ಜಮಖಂಡಿ ತಿಳಿಸಿದ್ದಾರೆ.