ಗಂಗಾವತಿ: ಅಯೋಧ್ಯೆಯಲ್ಲಿ ಇಂದು ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿದ ಹಿನ್ನೆಲೆ ನಗರ ಸೇರಿದಂತೆ ತಾಲೂಕಿನ ನಾನಾ ದೇಗುಲಗಳಲ್ಲಿ ಮಧ್ಯರಾತ್ರಿಯಿಂದಲೇ ರಾಮನಾಮ ಜಪ ಮಾಡಲಾಯಿತು.
ಆನೆಗೊಂದಿ ರಸ್ತೆಯಲ್ಲಿರುವ ಕಣಿವೆ ಆಂಜನೇಯ ದೇವಸ್ಥಾನದಲ್ಲಿ ಮಧ್ಯರಾತ್ರಿ 12 ಗಂಟೆಯಿಂದಲೇ ಭಕ್ತರು ಇಡೀ ದೇಗುಲದ ಆವರಣದಲ್ಲಿ ದೀಪಗಳನ್ನು ಹಚ್ಚಿ, ಅಹೋರಾತ್ರಿ ಹನುಮ ದೇಗುಲದ ಸುತ್ತಲು ರಾಮನಾಮ ಜಪ ಮಾಡುತ್ತಾ ಪ್ರದಕ್ಷಿಣೆ ಹಾಕಿದರು.
ನಗರದ ಶ್ರೀರಾಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಅರ್ಚನೆ, ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು. ಶಾಸಕ ಪರಣ್ಣ ಮುನವಳ್ಳಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ವಿಶೇಷ ಆರತಿ ಪೂಜೆ ಹಮ್ಮಿಕೊಂಡಿದ್ದರು.
ಇನ್ನು ಸಾರ್ವಜನಿಕರು ಹಾಗೂ ದೇಗುಲಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಬಿಜೆಪಿ ಮುಖಂಡರು ಸಿಹಿ ಹಂಚಿ ಸಂಭ್ರಮಿಸಿದರು. ಕೇವಲ ನಗರ ಮಾತ್ರವಲ್ಲದೆ ತಾಲೂಕಿನ ಬಹುತೇಕ ಗ್ರಾಮೀಣ ಭಾಗದಲ್ಲಿನ ನಾನಾ ದೇಗುಲಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.