ಗಂಗಾವತಿ (ಕೊಪ್ಪಳ): ನೂತನವಾಗಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಸ್ಥಾಪಿಸಿ ರಾಜಕೀಯ ಅಸ್ತಿತ್ವಕ್ಕೆ ಯತ್ನಿಸುತ್ತಿರುವ ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ಹೆಸರು ಗಂಗಾವತಿಯ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ. ಗಂಗಾವತಿ ವಿಧಾನಸಭಾ ಕ್ಷೇತ್ರ - 62ರ ಪರಿಷ್ಕೃತ ಮತದಾರರ ಪಟ್ಟಿ ಬಿಡುಗಡೆಯಾಗಿದ್ದು, ಇದರಲ್ಲಿ ರೆಡ್ಡಿಗೆ ಉಪ್ಪಿನಮಾಳಿ ಕ್ಯಾಂಪ್-ಮಾರುತೇಶ್ವರ ನಗರದ ಮತಗಟ್ಟೆಯ ವ್ಯಾಪ್ತಿಯಲ್ಲಿ ಹೆಸರು ಸೇರ್ಪಡೆ ಮಾಡಲಾಗಿದೆ.
ಜನಾರ್ದನ ರೆಡ್ಡಿ ಸದ್ಯಕ್ಕೆ ವಾಸವಾಗಿರುವ ಕನಕಗಿರಿ ರಸ್ತೆಯಲ್ಲಿನ ಕ್ರಿಯೇಟಿವ್ ಪಾರ್ಕ್ನಲ್ಲಿರುವ ಮನೆಯ ವಿಳಾಸವನ್ನೇ ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ನೀಡಿದ್ದಾರೆ. ರೆಡ್ಡಿಯ ಜೊತೆಗೆ ತಮ್ಮ ಆಪ್ತ ಅಲಿಖಾನ್ ಅವರ ಹೆಸರನ್ನು ಸಹ ಗಂಗಾವತಿಯ ಮತದಾರರ ಪಟ್ಟಿಯಲ್ಲಿ ಸೇರಿಸಿದ್ದಾರೆ. ಅಚ್ಚರಿ ಅಂದ್ರೆ, ಜನಾರ್ದನ ರೆಡ್ಡಿ ಮತ್ತು ಆಪ್ತ ಸಹಾಯಕ ಅಲಿಖಾನ್ ಇಬ್ಬರೂ ಒಂದೇ ಮನೆಯ ಸಂಖ್ಯೆ 2-9-81/12 ಎಂಬ ವಿಳಾಸವನ್ನು ಮತದಾರರ ಪಟ್ಟಿಗೆ ಸೇರ್ಪಡೆಗೆ ನೀಡಿದ್ದಾರೆ.
ಇದನ್ನೂ ಓದಿ : ಬಿಜೆಪಿ - ಕಾಂಗ್ರೆಸ್ ಪಕ್ಷವನ್ನು ಪುಟ್ಬಾಲ್ ತರಹ ಹೊಡೆದು ಹಾಕಿ: ಗಾಲಿ ಜನಾರ್ದನ ರೆಡ್ಡಿ
ಕಾಗುಣಿತ ದೋಷ: ಜನಾರ್ದನರೆಡ್ಡಿ ಮತ್ತು ಆಪ್ತ ಅಲಿಖಾನ್ಗೆ ಇಲಾಖೆಯಿಂದ ನೀಡಲಾಗಿರುವ ಮತದಾರರ ಚೀಟಿಯಲ್ಲಿ ಸಿಬ್ಬಂದಿ ಎಡವಟ್ಟು ಕಣ್ಣಿಗೆ ಕಾಣುತ್ತಿದೆ. ಜನಾರ್ದನ ರೆಡ್ಡಿ ಅವರ ತಂದೆ ಹೆಸರು ಜಿ. ಚೆಂಗಾರೆಡ್ಡಿ. ಆದರೆ ಒಂದು ಕಡೆ ಚಂಗರೆಡ್ಡಿ ಎಂದು ಮತ್ತೊಂದು ಕಡೆ ಚಂಗರೇದ್ದೀ ಎಂದು ಬರೆಯಲಾಗಿದೆ. ಮತ್ತೊಂದು ಕಡೆ, ರೆಡ್ಡಿ ಆಪ್ತ ಅಲಿಖಾನ್ ಅವರ ಹಸರಲ್ಲೂ ಇದೇ ಮರುಕಳಿಸಿದೆ. ಅಲಿಖಾನ್ ಅವರ ಹೆಸರನ್ನು ಒಂದು ಕಡೆ ಕೆ. ಮೆಹಪೂಜ್ ಅಲಿಖಾನ್ ಎಂದು ಸರಿಯಾಗಿ ನಮೂದಿಸಿದ್ರೆ ಮತ್ತೊಂದು ಕಡೆ ಆಲೀಖಾನ್ ಎಂದು ಬರೆಯಲಾಗಿದೆ. ಇವರ ತಂದೆ ಹೆಸರು ಕೆ. ಇಕ್ಬಾಲ್ ಇದ್ದರೆ ಮತದಾರರ ಪಟ್ಟಿಯಲ್ಲಿ ಖೆ ಇಕ್ಬಾಲ್ ಎಂದು ನಮೂದಿಸಲಾಗಿದೆ.
ಇದನ್ನೂ ಓದಿ : 'ಮಕ್ಕಳ ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚ ನನ್ನದು': ಜನಾರ್ದನ ರೆಡ್ಡಿ ಭರವಸೆ
ಇನ್ನು ಕಳೆದ ಮೂರು ದಿನಗಳ ಹಿಂದೆ ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಕಾರಣ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಗಾಲಿ ಜನಾರ್ದನ ರೆಡ್ಡಿ ಸೇರಿ ಒಟ್ಟು ಐದು ಜನರ ವಿರುದ್ಧ ಕನಕಗಿರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ವಾಹನದ ಮೇಲೆ ಕೆಆರ್ಪಿಪಿ ಪಕ್ಷದ ಸಂಸ್ಥಾಪಕ ಜನಾರ್ದನ ರೆಡ್ಡಿ, ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ನಿಯೋಜಿತ ಅಭ್ಯರ್ಥಿ ಲಕ್ಷ್ಮಿ ಅರುಣಾ, ಕನಕಗಿರಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಡಾ. ಚಾರುಲ್ ವೆಂಕಟರಮಣ ದಾಸರಿ ಭಾವ ಚಿತ್ರವಿದ್ದು, ಚುನಾವಣಾ ನೀತಿ ಸಂಹಿತೆ ಜಾರಿಯಾದರೂ ಸಹ ಅನುಮತಿ ಪಡೆಯದೆ ಪ್ರಚಾರ ಮಾಡುತ್ತಿದ್ದಾರೆ ಎಂದು ವಾಹನ ಮಾಲೀಕ ಜಿ. ನವೀನ್ ಕುಮಾರ್, ವಾಹನ ಚಾಲಕನ ವಿರುದ್ಧ FIR ದಾಖಲಾಗಿತ್ತು.
ಇದನ್ನೂ ಓದಿ : ನಾನು ಕಿಂಗೋ, ಕಿಂಗ್ ಮೇಕರೋ ಸ್ವಲ್ಪ ಕಾದು ನೋಡಿ : ಜನಾರ್ದನ ರೆಡ್ಡಿ