ಕೊಪ್ಪಳ: ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ನಾಲ್ಕನೇ ಹಂತದ ಲಾಕ್ಡೌನ್ ಮುಂದುವರೆದಿದ್ದು, ಈ ಅವಧಿಯಲ್ಲಿ ಭಾನುವಾರ ಎಲ್ಲಾ ಚಟುವಟಿಕೆಗಳು ಹಾಗೂ ಜನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ್ ಆದೇಶ ಹೊರಡಿಸಿದ್ದಾರೆ.
ಮೇ. 31ರವರೆಗೆ ಲಾಕ್ಡೌನ್ ಮುಂದುವರೆಸಿ ಸರ್ಕಾರ ಆದೇಶ ಮಾಡಿದೆ. ಈ ಅವಧಿಯಲ್ಲಿ ಎಲ್ಲಾ ದಿನ ಸಂಜೆ 7 ಗಂಟೆಯಿಂದ ಬೆಳಗ್ಗೆ 7 ಗಂಟೆಯವರೆಗೆ ಎಲ್ಲಾ ಚಟುವಟಿಕೆಗಳು ಹಾಗೂ ಜನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದರ ಜೊತೆಗೆ ನಾಲ್ಕನೇ ಹಂತದ ಲಾಕ್ಡೌನ್ ಅವಧಿಯಲ್ಲಿ ಬರುವ ಮೇ 24 ಮತ್ತು 31ರ ಭಾನುವಾರಗಳಂದು ಸಂಪೂರ್ಣ ಲಾಕ್ಡೌನ್ ಜಾರಿ ಮಾಡಲಾಗಿದೆ. ಈ ದಿನಗಳಂದು ಎಲ್ಲಾ ಅನಗತ್ಯ ಚಟುವಟಿಕೆ ಹಾಗೂ ಜನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
144 ಸೆಕ್ಷನ್ ಜಾರಿಯಲ್ಲಿರುವುದರಿಂದ ಸಂಪೂರ್ಣ ಲಾಕ್ಡೌನ್ ದಿನವಾದ ಮೇ. 24 ಹಾಗೂ ಮೇ. 31ರ ಭಾನುವಾರ ಮದುವೆ ಕಾರ್ಯಕ್ರಮಗಳಿಗಾಗಿ ನೀಡಲಾಗಿರುವ ಎಲ್ಲಾ ಪರವಾನಗಿಗಳನ್ನು ರದ್ದುಪಡಿಸಲಾಗಿದೆ. ನಿಯಮ ಮೀರಿ ಮದುವೆ ನಡೆಸಿದರೆ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಆದೇಶದಲ್ಲಿ ಎಚ್ಚರಿಕೆ ನೀಡಿದ್ದಾರೆ.