ಕೊಪ್ಪಳ: ನಾಲ್ಕು ಕರಡಿಗಳು ಏಕಕಾಲಕ್ಕೆ ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕವಾಗಿ ದಾಳಿ ನಡೆಸಿದ ಘಟನೆ ಭಾನುವಾರ ಸಂಜೆ ಇರಕಲ್ ಗಡಾ ಬಳಿ ನಡೆದಿದ್ದು, ಸ್ಥಳೀಯರು ಭಯಭೀತರಾಗಿದ್ದಾರೆ. ಕೊಪ್ಪಳ ತಾಲೂಕಿನ ಹೊಸುರು ಗ್ರಾಮದ ಈರಣ್ಣ ಜಾಲಿ ಗಿಡದ ಎಂಬವರು ಹುಲಿಗಿಗೆ ಹೋಗುತ್ತಿದ್ದಾಗ ಘಟನೆ ನಡೆದಿದೆ.
ಇರಕಲ್ ಗಡಾ ಸಮೀಪ ತೆರಳುತ್ತಿದ್ದಾಗ ಎದುರಾದ ನಾಲ್ಕು ಕರಡಿಗಳು ಈರಣ್ಣನವರ ಮೈ, ಕೈ, ತಲೆ ಭಾಗಕ್ಕೆ ಬಲವಾಗಿ ಕಚ್ಚಿ, ತೀವ್ರ ಗಾಯಗೊಳಿಸಿವೆ. ಅಸ್ವಸ್ಥರಾಗಿ ಬಿದ್ದಿದ್ದಾತನನ್ನು ಸ್ಥಳೀಯರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಈ ವ್ಯಾಪ್ತಿಯಲ್ಲಿ ಕರಡಿ ದಾಳಿ ಹೆಚ್ಚುತ್ತಿದ್ದು, ಇತ್ತೀಚೆಗಷ್ಟೇ ಇಂದರಗಿಯಲ್ಲಿ ದಾಳಿ ನಡೆದಿತ್ತು.
ಕರಡಿ ಸಂರಕ್ಷಿತ ಪ್ರದೇಶ ಘೋಷಣೆಗೆ ಆಗ್ರಹ: ಈ ಭಾಗದಲ್ಲಿ ಕರಡಿಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಹೀಗಾಗಿ 'ಕರಡಿ ಸಂರಕ್ಷಿತ ಪ್ರದೇಶ'ವೆಂದು ಘೋಷಿಸಲು ಅರಣ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ, ಸರ್ಕಾರ ಅನುಮೋದನೆ ನೀಡಿಲ್ಲ. ಇತ್ತೀಚೆಗೆ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಕರಡಿ ದಾಳಿ ತಡೆಗೆ ಅರಣ್ಯದ ಸುತ್ತ ತಂತಿಬೇಲಿ ಹಾಕುವಂತೆ ಮನವಿ ಸಲ್ಲಿಸಿದ್ದರು. ಅದೂ ಕೂಡ ಕಾರ್ಯಗತವಾಗಿಲ್ಲ. ಆದಷ್ಟು ಬೇಗ ಸರ್ಕಾರ ಕರಡಿ ಸಂರಕ್ಷಿತ ಪ್ರದೇಶವೆಂದು ಘೋಷಣೆ ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: Bear attack: ಶಿಗ್ಗಾಂವಿ: ರೈತರ ಮೇಲೆ ಕರಡಿ ದಾಳಿ.. ಇಬ್ಬರಿಗೆ ಗಂಭೀರ ಗಾಯ
ರೈತರ ಮೇಲೆ ಕರಡಿ ದಾಳಿ: ಜಮೀನಿಗೆ ತೆರಳಿದ್ದ ಇಬ್ಬರು ರೈತರ ಮೇಲೆ ಏಕಾಏಕಿ ಕರಡಿಯೊಂದು ದಾಳಿ ಮಾಡಿ ತೀವ್ರ ಗಾಯಗೊಳಿಸಿದ್ದ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಸವನಕಟ್ಟಿ ಗ್ರಾಮದಲ್ಲಿ ಕಳೆದ ಜೂನ್ ತಿಂಗಳಲ್ಲಿ ನಡೆದಿತ್ತು. ಗಾಯಾಳುಗಳನ್ನು ಬಸೀರಸಾಬ್ (45) ಮತ್ತು ರಜಾಕ್ (30) ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜಮೀನಿಗೆ ತೆರಳಿದ್ದಾಗ ಕರಡಿ ದಾಳಿ ಮಾಡಿ, ತೀವ್ರವಾಗಿ ಗಾಯಗೊಳಿಸಿತ್ತು. ಶಿಗ್ಗಾಂವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.
ಜಮೀನಿಗೆ ಕೆಲಸಕ್ಕೆಂದು ತೆರಳಿದ್ದ ರೈತನೊಬ್ಬ ಕರಡಿ ದಾಳಿಗೆ ಬಲಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ಕಳೆದ ಅಕ್ಟೋಬರ್ ತಿಂಗಳಲ್ಲಿ ನಡೆದಿತ್ತು. ಮೃತ ರೈತನನ್ನು ಘೋಶೆ (ಬಿಕೆ) ಗ್ರಾಮದ ಭಿಕಾಜಿ ಈರಪ್ಪ ಮಿರಾಶಿ (63) ಎಂದು ಗುರುತಿಸಲಾಗಿದೆ. ಹೊಲಕ್ಕೆ ಕೆಲಸಕ್ಕೆ ತೆರಳಿದ್ದ ರೈತ ಭಿಕಾಜಿ ಮೇಲೆ ಕರಡಿ ದಾಳಿ ನಡೆಸಿದೆ. ಈ ವೇಳೆ, ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಜನರು ಕರಡಿ ಓಡಿಸಲು ಯತ್ನಿಸಿದ್ದರು. ಆದರೆ, ಕರಡಿ ದಾಳಿಯನ್ನು ಮುಂದುವರೆಸಿ ರೈತನನ್ನು ಸುಮಾರು 2 ಕಿ.ಮೀ ಕಾಡಿನೊಳಗೆ ಎಳೆದುಕೊಂಡು ಹೋಗಿತ್ತು. ಬಳಿಕ ಮೃತದೇಹ ಅರಣ್ಯ ವ್ಯಾಪ್ತಿಯಲ್ಲಿ ಪತ್ತೆಯಾಗಿತ್ತು.
ಇದನ್ನೂ ಓದಿ: ಬೆಳಗಾವಿ : ಜಮೀನಿಗೆ ತೆರಳಿದ್ದ ರೈತ ಕರಡಿ ದಾಳಿಗೆ ಬಲಿ