ಕೊಪ್ಪಳ: ಈ ಸರ್ಕಾರ ಯಾವ ದುಡ್ಡಿನಿಂದಾಗಿದೆ ಎಂದು ಕೇಳಿದವರು ಯಾರು?. ಆದರೆ 17 ಶಾಸಕರು ರಾಜೀನಾಮೆ ಕೊಟ್ಟು ಹೋಗುತ್ತಾರೆ ಎಂದರೆ ಯಾವ ಕಾರಣಕ್ಕೆ ಎಂಬುದು ಎಲ್ಲರಿಗೂ ಗೊತ್ತು ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.
ಓದಿ: ಮಮತಾ ಬ್ಯಾನರ್ಜಿ ಸಹೋದರನಿದ್ದ ಕಾರಿಗೆ ಗುದ್ದಿದ ಟ್ರಕ್
ನಗರದಲ್ಲಿ ಮಾತನಾಡಿದ ಅವರು, 17 ಜನ ಶಾಸಕರು ಯಾಕೆ ರಾಜೀನಾಮೆ ನೀಡಿದರು ಎಂಬ ಬಗ್ಗೆ ವಿಧಾನಸಭೆಯಲ್ಲೂ ಚರ್ಚೆಯಾಗಿದೆ. ಶಾಸಕರ ಮನೆಯಲ್ಲಿ 5 ಕೋಟಿ ರೂ. ಹಣವಿಟ್ಟ ಬಗ್ಗೆ ಕೋಲಾರ ಶಾಸಕ ಶ್ರೀನಿವಾಸ್ ಅವರು ಅಂದು ನೇರವಾಗಿ ಅಪಾದನೆ ಮಾಡಿದ್ದರು. ಈ ಸರ್ಕಾರ ಯಾವ ದುಡ್ಡಿನಿಂದ ಬಂದಿದೆಯೋ ಗೊತ್ತಿಲ್ಲ. ರಾಜ್ಯದಲ್ಲಿ ಸರ್ಕಾರ ಇದೆ ಅಂತ ಅನಿಸುವುದಿಲ್ಲ ಎಂದು ಕುಟುಕಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ತನ್ವೀರ್ ಸೇಠ್ ಅವರ ನಡುವೆ ಯಾವುದೇ ಕೋಲ್ಡ್ ವಾರ್ ನಡೆದಿಲ್ಲ. ಇದು ಮಾಧ್ಯಮಗಳ ಸೃಷ್ಟಿ, ನಮ್ಮ ನಾಯಕರು ಒಗ್ಗಟ್ಟಾಗಿದ್ದಾರೆ. ನಾವು ಒಗ್ಗಟ್ಟಾದರೆ ಬಿಜೆಪಿ ಸರ್ಕಾರ ಮುಗಿದಂತೆ ಎಂದರು.
ಕನಕಗಿರಿ ಶಾಸಕ ಬಸವರಾಜ ದಡೇಸೂಗುರು ನನ್ನ ಬಗ್ಗೆ ಏನಾದರೂ ಇದ್ದರೆ ಇಂದೇ ದಾಖಲೆಗಳನ್ನು ಬಿಡುಗಡೆ ಮಾಡಲಿ. ನಿನ್ನೆ ಮೊನ್ನೆಯಿಂದ ರಾಜಕಾರಣ ಮಾಡುತ್ತಿಲ್ಲ, ಕಾಲೇಜು ದಿನಗಳಿಂದಲೂ ರಾಜಕೀಯ ಮಾಡುತ್ತಾ ಬಂದಿದ್ದೇನೆ. ನಾನು ಎಲ್ಲವನ್ನೂ ಬಲ್ಲೆ, ಆದರೆ ಯಾವ ಸಂದರ್ಭದಲ್ಲಿ ಯಾರಿಗೆ ಯಾವ ರೀತಿ ಮಾತನಾಡಬೇಕು ಎಂಬ ಕಾಮನ್ ಸೆನ್ಸ್ ಹೊಂದಿದ್ದೇನೆ ಎಂದು ತಂಗಡಗಿ ತಿಳಿಸಿದರು.