ಕೊಪ್ಪಳ: ಸಿ.ಟಿ ರವಿ, ಗೃಹ ಸಚಿವ ಆರಗ ಜ್ಞಾನೇಂದ್ರ ಡ್ರಗ್ಸ್ ತಗೆದುಕೊಂಡವರ ರೀತಿ ಮಾತನಾಡುತ್ತಾರೆ. ಹೀಗಾಗಿ ಡ್ರಗ್ಸ್ ವಿಚಾರವಾಗಿ ಮೊದಲು ಬಿಜೆಪಿಯವರನ್ನು ಪರೀಕ್ಷಿಸಬೇಕು ಎಂದು ಕಾಂಗ್ರೆಸ್ ಮುಖಂಡ ಶಿವರಾಜ ತಂಗಡಗಿ ಹೇಳಿದ್ದಾರೆ.
ಬಿಜಿಪಿಯವರು ಡ್ರಗ್ಸ್ ಅನ್ನು ಕಿರಾಣಿ ಅಂಗಡಿಗಳು, ಪಾನ್ ಶಾಪ್ನಲ್ಲಿ ಮಾರುವ ತರಹ ಮಾಡಿದ್ದಾರೆ. ಬಿಜೆಪಿಯವರೇ ಡ್ರಗ್ಸ್ ತೆಗೆದುಕೊಳ್ಳುತ್ತಾರೆ ಎನ್ನುವ ಅನುಮಾನ ನನಗಿದೆ. ಹೀಗಾಗಿ ಬಿಜೆಪಿಯವರೆಲ್ಲರ ಕೂದಲು ಚೆಕ್ ಮಾಡಬೇಕು. ಸಿ.ಟಿ.ರವಿ, ಗೃಹ ಸಚಿವ ಆರಗ ಜ್ಞಾನೇಂದ್ರ ಜವಾಬ್ದಾರಿ ಸ್ಥಾನದಲ್ಲಿದ್ದು ಡ್ರಗ್ಸ್ ತೆಗೆದುಕೊಂಡವರ ತರಹ ಮಾತನಾಡುತ್ತಾರೆ. ನಟಿ, ಆ್ಯಂಕರ್ ಅನುಶ್ರೀಯವರನ್ನು ಚೆಕ್ ಮಾಡುವ ಮೊದಲು ಬಿಜೆಪಿಯವರನ್ನು ಚೆಕ್ ಮಾಡಬೇಕು ಎಂದರು.
ಯುವಜನತೆ ಡ್ರಗ್ಸ್ನಿಂದ ಹಾಳಾಗುತ್ತಿದ್ದಾರೆ. ಪೆಡ್ಲರ್ಗಳು, ಶ್ರೀಮಂತರ ಮಕ್ಕಳು, ಸಿನಿಮಾದವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಹಾಗಾಗಿ, ಮೊದಲು ಸರ್ಕಾರದವರನ್ನು ಚೆಕ್ ಮಾಡಿದರೆ ಒಳ್ಳೆಯದು. ಡ್ರಗ್ಸ್ನಿಂದ ಬಿಜೆಪಿಯವರಿಗೆ ಮಾಮೂಲಿ ಹೋಗುತ್ತಿರಬೇಕು ಎಂದು ಆರೋಪಿಸಿದರು.
ಸಿ.ಟಿ. ರವಿ ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಮಾಡಬೇಕು ಅಂತಾರೆ. ನಾವು ಹುಟ್ಟಿಸಿದ ಕೂಸಿಗೆ ನೀವು ಯಾಕೆ ಹೆಸರು ಇಡುತ್ತೀರಿ? ನೀವು ಕೂಸು ಹುಟ್ಟಿಸಿ ನಿಮ್ಮ ಹೆಸರಿಡಿ ಎಂದು ತಂಗಡಗಿ ಟೀಕಿಸಿದರು.