ಗಂಗಾವತಿ(ಕೊಪ್ಪಳ): ದೇವರಾಜ ಅರಸು ಅವರ ಸಂಪುಟದಲ್ಲಿ ಮೀನುಗಾರಿಕಾ ಸಚಿವರಾಗಿದ್ದ ಚಿಂತಲಾ ಯಾದವರಾವ್ (84) ಬೆಂಗಳೂರಿನ ಸಾಗರ್ ಆಸ್ಪತ್ರೆಯಲ್ಲಿ ವಯೋಸಹಜ ಕಾಯಿಲೆ ಮತ್ತು ಹೃದಯಾಘಾತದಿಂದ ನಿಧನರಾಗಿದ್ದಾರೆ. ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ 1978ರಲ್ಲಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದ ಯಾದವರಾವ್, ಬಳಿಕ ಸುಮಾರು ಆರು ತಿಂಗಳಿಗೂ ಹೆಚ್ಚು ಕಾಲ ಮೀನುಗಾರಿಕಾ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
ಮಾಜಿ ಸಂಸದ ಹೆಚ್.ಜಿ. ರಾಮುಲು ಅವರೊಂದಿಗೆ ಗುರುತಿಸಿಕೊಂಡು ರಾಜಕೀಯ ಮಾಡಿದ್ದ ಯಾದವರಾವ್, ಒಮ್ಮೆ ಮಾತ್ರ ಶಾಸಕರಾಗಿದ್ದರು. ಅದೇ ಸಂದರ್ಭದಲ್ಲಿ ಸಚಿವರಾಗಿದ್ದರು. ಮೃತರಿಗೆ ಪತ್ನಿ ಸುಗುಣ ಸೇರಿದಂತೆ ಒಬ್ಬ ಪುತ್ರಿ ವೈದ್ಯೆ, ನಾಲ್ವರು ಎಂಜಿನೀಯರ್ ಪುತ್ರರು ಇದ್ದಾರೆ.
ಇದನ್ನೂ ಓದಿ: ರಾಜಕೀಯ ಮುನ್ನೆಲೆಗೆ ಬರಲು ಸಜ್ಜಾದ ವಿಜಯೇಂದ್ರ, ಬಿಎಸ್ವೈ ತಂತ್ರಗಾರಿಕೆ ಏನು?
ಗಂಗಾವತಿ ಪುರಸಭೆಯ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ನಗರದ ಪ್ರಮುಖ ಲ್ಯಾಂಡ್ ಮರ್ಕ್ ಎಂದು ಪರಿಗಣಿಸಲ್ಪಡುವ ನೆಹರು ಉದ್ಯಾನಕ್ಕೆ ಯಾದವರಾವ್ ಶ್ರೀಕಾರ ಹಾಕಿದ್ದರು. ಗುರುವಾರ ಸಂಜೆ ಬೆಂಗಳೂರಿನ ಬಶಂಕರಿಯಲ್ಲಿನ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.