ಗಂಗಾವತಿ: ಮಾಜಿ ಸಚಿವ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಇಕ್ಬಾಲ್ ಅನ್ಸಾರಿ ಲಾಕ್ಡೌನ್ ಬಳಿಕ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಗೌಸಿಯಾ ಕಾಲೋನಿ ಹಾಗೂ ಮೆಹಬೂಬ ನಗರದ ಸುಮಾರು 500 ಕ್ಕೂ ಹೆಚ್ಚು ಕುಟುಂಬಗಳಿಗೆ ಆಹಾರ ಸಾಮಗ್ರಿಗಳನ್ನು ಅವರು ವಿತರಿಸಿದರು.

ಲಾಕ್ಡೌನ್ ಜಾರಿಯಾಗಿ ಒಂದು ತಿಂಗಳು ಕಳೆದರೂ ಹೊರಗೆ ಬಾರದ ಹಾಗೂ ಬಡ ಜನರ ನೋವಿಗೆ ಸ್ಪಂದಿಸದ ಬಗ್ಗೆ ಕಾಂಗ್ರೆಸ್ ನಾಯಕರು ಅದರಲ್ಲೂ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಟೀಕೆಗಳು ಕೇಳಿ ಬಂದಿದ್ದವು. ಇದರಿಂದ ಎಚ್ಚೆತ್ತುಕೊಂಡ ಇಕ್ಬಾಲ್ ಅನ್ಸಾರಿ, ಗಂಗಾವತಿಯ ಎಲ್ಲಾ 35 ವಾರ್ಡ್ಗಳ ಕಡುಬಡವರನ್ನು ಗುರುತಿಸಿ, ತಮ್ಮ ಸ್ವಂತ ಹಣ ಖರ್ಚು ಮಾಡಿ ಖರೀದಿಸಿದ ಆಹಾರ ಸಾಮಗ್ರಿ ಹಾಗೂ ಮಾಸ್ಕ್ಗಳನ್ನು ವಿತರಿಸಿದರು. ಇಂದು ಸಾಂಕೇತಿಕವಾಗಿ 500 ಕುಟುಂಬಗಳಿಗೆ ಅಗತ್ಯ ಸಾಮಗ್ರಿಗಳನ್ನು ವಿತರಿಸಿದ್ದು ನಾಳೆಯಿಂದ ಪ್ರತಿದಿನ ಲಾಕ್ಡೌನ್ ಮುಗಿಯುವವರೆಗೂ ಇದೇ ರೀತಿ ನಿಮಗೆ ಬೇಕಾದ ಸಾಮಗ್ರಿಗಳನ್ನು ವಿತರಿಸುತ್ತೇನೆ ಎಂದರು. ಇಕ್ಬಾಲ್ ಅನ್ಸಾರಿ ಅವರಿಂದ ಸಾಮಗ್ರಿಗಳನ್ನು ಪಡೆದ ಜನರು ಮಾಜಿ ಸಚಿವರಿಗೆ ಧನ್ಯವಾದ ಅರ್ಪಿಸಿದರು.