ಕೊಪ್ಪಳ: ಜೈನಕಾಶಿ ಪ್ರಖ್ಯಾತಿಯ ಕೊಪ್ಪಳದಲ್ಲಿ ವಿಧಾನಸಭಾ ಚುನಾವಣೆಯ ಕಾವು ಜೋರಾಗಿದೆ. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಮೂರೂ ಪಕ್ಷಗಳಿಂದ ತ್ರಿಕೋನ ಸ್ಪರ್ಧೆಗೆ ಅಖಾಡ ಸಿದ್ಧವಾಗಿದೆ. ಪಕ್ಷಗಳ ಅಭ್ಯರ್ಥಿಗಳು ಬಿರುಸಿನ ಮತಬೇಟೆ ನಡೆಸುತ್ತಿದ್ದಾರೆ.
ವಿಧಾನಸಭಾ ಚುನಾವಣೆಯ ಮೈದಾನದಲ್ಲಿ ನಾವಿದ್ದೇವೆ. ಇಲ್ಲಿ ಇತರರನ್ನು ಟೀಕಿಸುವ ಬದಲು ಸಿಕ್ಸ್, ಪೋರ್ ಬಾರಿಸುವ ಮೂಲಕ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರಾದ ಮೊಹಮ್ಮದ್ ಅಜರುದ್ದೀನ್ ಮತದಾರರಿಗೆ ಮನವಿ ಮಾಡಿದರು.
ನಗರದ ತೆಗ್ಗಿನಕೆರೆಯಲ್ಲಿ ಗುರುವಾರ ಹಮ್ಮಿಕೊಂಡ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಜನರಿಗೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಕಾಂಗ್ರೆಸ್ ಸರಕಾರ ನೀಡಿದೆ. ಈ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಅನೇಕ ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ ಬಡಜನರಿಗೆ ಅನುಕೂಲ ಕಲ್ಪಿಸಿದೆ ಎಂದರು.
ಅಭಿವೃದ್ಧಿಗೆ ಮತ ಚಲಾಯಿಸಿ: ಮೈದಾನದಲ್ಲಿ 100 ರನ್ ಬಾರಿಸಬೇಕು ಎಂದರೆ ಕಷ್ಟ ಪಡಬೇಕು. ಚುನಾವಣೆಯಲ್ಲೂ ಸಹ ಎಲ್ಲರೂ ಗೆಲ್ಲೋಕೆ ಆಗಲ್ಲ. ಯಾರು ಜನರ ಪರ, ಅಭಿವೃದ್ಧಿ ಪರ ಇರುತ್ತಾರೋ ಅವರು ಗೆಲ್ಲುತ್ತಾರೆ. ರಾಘವೇಂದ್ರ ಹಿಟ್ನಾಳ ಅವರು ಕೊಪ್ಪಳದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಅವರನ್ನು ಈ ಬಾರಿಯ ಚುನಾವಣೆಯಲ್ಲಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿ ಎಂದು ಕರೆ ನೀಡಿದರು.
ಕೊಪ್ಪಳದ ಮಹಿಳೆಯರಿಗೆ ನಾನೊಂದು ವಿನಂತಿ ಮಾಡುವೆ. ಎಲ್ಲರೂ ಮತದಾನ ಮಾಡಿ. ನಿಮ್ಮ ಪತಿಗೂ ಮತದಾನ ಮಾಡಲು ಹೇಳಿ. ಅವರು ಮತದಾನ ಮಾಡದಿದ್ದರೆ ಊಟ ಕೊಡಬೇಡಿ. ಮೊದಲು ಮತದಾನ ಮಾಡಲು ಹೇಳಿ ಎಂದು ಹೇಳಿದರು.
ಒಂದೊಳ್ಳೆ ಕ್ಯಾಪ್ಟನ್ ಇದ್ದರೆ ಟೀಂ ಚೆನ್ನಾಗಿ ಇರುತ್ತೆ. ಮ್ಯಾಚ್ ಗೆಲ್ಲುತ್ತೆ. ನಾನು 99 ಮ್ಯಾಚ್ ಆಡಿದ್ದೇನೆ. ನೀವು ರಾಘವೇಂದ್ರ ಹಿಟ್ನಾಳ ಅವರನ್ನು ಈ ಬಾರಿಯ ಚುನಾವಣೆಯಲ್ಲಿ ಗೆಲ್ಲಿಸಿದರೆ 100 ಮ್ಯಾಚ್ ಆಡಿದಂತೆ ಆಗುತ್ತೆ. ಯಾವುದೇ ಕಾರಣಕ್ಕೂ ರನೌಟ್ ಮಾಡದೇ, ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಕ್ರಿಕೆಟ್ ಶೈಲಿಯಲ್ಲಿ ವಿನಂತಿಸಿದರು.
ನಾನು ಕೊಪ್ಪಳಕ್ಕೆ ಬರುತ್ತೇನೆಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಕರ್ನಾಟಕದ ಕೊಪ್ಪಳದಲ್ಲೇ ನನ್ನ ಮೊದಲ ಪ್ರಚಾರ ಮಾಡಿದ್ದೇನೆ. ಈ ಹಿಂದಿನ ಸರಕಾರದ ವೈಫಲ್ಯದ ಬಗ್ಗೆ ಹೆಚ್ಚೇನೂ ಮಾತನಾಡಲ್ಲ. ನಾವು ಏನು ಮಾಡಬೇಕು ಎಂಬುದನ್ನು ಯೋಚಿಸಿ ಮತ ಚಲಾಯಿಸಿ ಎಂದು ತಿಳಿಸಿದರು.
ಅನೇಕ ವರ್ಷಗಳಿಂದ ಅಧಿಕಾರದ ಚುಕ್ಕಾಣಿ ಹಿಡಿಯುತ್ತಲೇ ಬಂದಿರುವ ಕರಡಿ ಮತ್ತು ಹಿಟ್ನಾಳ್ 'ಕುಟುಂಬ ರಾಜಕಾರಣ'ಕ್ಕೆ ಈ ಬಾರಿ ಮತದಾರರು ಬ್ರೇಕ್ ಹಾಕಲಿದ್ದಾರಾ? ಅನ್ನೋದನ್ನು ಕಾದುನೋಡಬೇಕಿದೆ. ಕೊಪ್ಪಳದಲ್ಲಿ ಇಲ್ಲಿವರೆಗೂ ಕರಡಿ ಮತ್ತು ಹಿಟ್ನಾಳ್ ಕುಟುಂಬಗಳ ಮಧ್ಯೆ ನೇರಾನೇರ ಸ್ಪರ್ಧೆ ಇರುತ್ತಿತ್ತು. ಈ ಸಲ ಬಿಜೆಪಿ ಟಿಕೆಟ್ ವಂಚಿತ ಸಿ.ವಿ.ಚಂದ್ರಶೇಖರ ಜೆಡಿಎಸ್ನಿಂದ ಸ್ಪರ್ಧಿಸಿದ್ದು ಪೈಪೋಟಿ ಹೆಚ್ಚಾಗಿದೆ.
ಇದನ್ನೂ ಓದಿ: ವೇದಿಕೆಯಲ್ಲಿ ಕಣ್ಣೀರಿಟ್ಟ ಕೊಪ್ಪಳ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿವಿ ಚಂದ್ರಶೇಖರ್