ಗಂಗಾವತಿ: ದಲಿತರು, ಶೋಷಿತರಿಗೆ ನ್ಯಾಯ ಸಿಗಬೇಕಾದರೆ ದೇಶದಲ್ಲಿ ಜಾತಿ ವ್ಯವಸ್ಥೆ ನಾಶವಾಗಬೇಕು ಎಂಬ ತತ್ತ್ವದಲ್ಲಿ ನಂಬಿಕೆ ಇಟ್ಟಿದ್ದ ಅಂಬೇಡ್ಕರ್ ಇದಕ್ಕಾಗಿಯೇ ವಿಶ್ವದಲ್ಲಿ ಶ್ರೇಷ್ಠ ಸಂವಿಧಾನ ರಚಿಸಿ ಶೋಷಿತರಿಗೆ ಧ್ವನಿಯಾಗಿದ್ದಾರೆ ಎಂದು ಎಐಸಿಸಿಟಿಯು ಸಂಘಟನೆಯ ರಾಜ್ಯಾಧ್ಯಕ್ಷ ಕ್ಲಿಪ್ಟನ್ ರೋಜಾರಿಯೋ ಹೇಳಿದರು.
ನಗರದ ಬಾಬು ಜಗಜೀವನ ರಾಂ ವೃತ್ತದಲ್ಲಿ ಕಾರ್ಮಿಕ ಸಂಘಟನೆಗಳು ಹಮ್ಮಿಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ನಿಮಿತ್ತ ಮುಖ್ಯಭಾಷಣಕಾರರಾಗಿ ಪಾಲ್ಗೊಂಡು ಅಂಬೇಡ್ಕರ್ ಜೀವನ, ಸಾಧನೆಗಳ ಬಗ್ಗೆ ಮಾತನಾಡಿದರು. ಜಾತಿ ವ್ಯವಸ್ಥೆ ನಾಶ ಪಡಿಸುವ ಉದ್ದೇಶಕ್ಕೆ ಮನುಸ್ಮೃತಿಯನ್ನು ಅಂಬೇಡ್ಕರ್ ಸುಟ್ಟುಹಾಕಿದ್ದರು. ಜಾತಿ ಕಾರಣಕ್ಕಾಗಿಯೇ ಇಂದು ದೇಶದಲ್ಲಿ ಕೋಟ್ಯಂತರ ಜನ ಸಂಕಷ್ಟದಲ್ಲಿದ್ದಾರೆ. ಕೆಳ ಸಮುದಾಯಗಳು ಇಂದಿಗೂ ಶೋಷಣೆಯಿಂದ ಮುಕ್ತವಾಗಿಲ್ಲ ಎಂದರು.
ಅಂಬೇಡ್ಕರ್ ಜಯಂತಿಗೆ ಅಧಿಕಾರಿ ವರ್ಗ ಅನುಮತಿ ನೀಡಲಿಲ್ಲ. ಈ ಬಗ್ಗೆ ಧಾವಾಡದ ಹೈಕೋರ್ಟ್ನಲ್ಲಿ ಪ್ರಶ್ನಿಸಿದಾಗ ನಮ್ಮ ಪರವಾಗಿ ತೀರ್ಪು ಬಂದಿದೆ. ಅಂಬೇಡ್ಕರ್ ಜಯಂತಿಯನ್ನು ತಡೆಯಲು ಸರ್ಕಾರ ಯತ್ನಿಸುವ ಮೂಲಕ ನಾಚಿಕೆಗೇಡಿನ ಕೆಲಸಕ್ಕೆ ಕೈಹಾಕಿದೆ ಎಂದು ರೋಜಾರಿಯೋ ಆಕ್ರೋಶ ವ್ಯಕ್ತಪಡಿಸಿದರು.