ಗಂಗಾವತಿ: ಖಾತಾ ಉತಾರದಲ್ಲಿ ತಂದೆ ಹೆಸರು ಸೇರಿಸಲು ವ್ಯಕ್ತಿಯೊಬ್ಬರಿಂದ ಆರು ಸಾವಿರ ರೂಪಾಯಿ ಲಂಚ ಕೇಳಿದ ತಹಶೀಲ್ದಾರ್ ಎಲ್.ಡಿ. ಚಂದ್ರಕಾಂತ್ ಮತ್ತು ಭೂಮಿ ವಿಭಾಗದ ಶರಣಪ್ಪ ಎಂಬ ಶಿರಸ್ತೆದಾರ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಅವರನ್ನು ವಶಕ್ಕೆ ಪಡೆದಿದ್ದಾರೆ.
ಎಸಿಬಿಯ ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ ನೇತೃತ್ವದ ತಂಡ, ತಹಶೀಲ್ದಾರ್ ಕಚೇರಿಯ ಮೇಲೆ ದಾಳಿ ಮಾಡಿ ಹಣ ಪಡೆಯುತ್ತಿರುವಾಗ ರೆಡ್ ಹ್ಯಾಂಡ್ ಆಗಿ ಹಿಡಿದು ಇಬ್ಬರೂ ಅಧಿಕಾರಿಗಳನ್ನು ವಶಕ್ಕೆ ಪಡೆದಿದ್ದಾರೆ.
ವಡ್ಡರಹಟ್ಟಿಯ ಸುಂದರರಾಜು ಎಂಬುವವರು ತಮ್ಮ ಹೊಲದ ಖಾತಾ ಉತಾರದಲ್ಲಿ ಸಹಾಯಕ ಆಯುಕ್ತರ ಆದೇಶದ ಮೇರೆಗೆ ತಂದೆಯ ಹೆಸರು ಗಣೇಶ ಎಂದು ಸೇರಿಸುವಂತೆ ಮನವಿ ಮಾಡಿದ್ದರು. ಇದಕ್ಕೆ ಉಭಯ ಅಧಿಕಾರಿಗಳು ಆರು ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಇದರಿಂದ ಬೇಸತ್ತ ಸುಂದರರಾಜು ಎಸಿಬಿಗೆ ದೂರು ನೀಡಿದ್ದರು.
ಈ ಹಿನ್ನೆಲೆ ಸೋಮವಾರ ಮಿನಿ ವಿಧಾನಸೌಧಕ್ಕೆ ತೆರಳಿ ದೂರುದಾರರು ಅಧಿಕಾರಿಗಳಿಗೆ ಹಣ ನೀಡುತ್ತಿರುವಾಗ ದಾಳಿ ಮಾಡಿದ ಎಸಿಬಿ ಅಧಿಕಾರಿಗಳು, ಲಂಚಕ್ಕೆ ಬೇಡಿಕೆ ಇಟ್ಟ ಅಧಿಕಾರಿಗಳನ್ನು ಬಂಧಿಸಿದ್ದಾರೆ.