ಕೊಪ್ಪಳ: ಕೋವಿಡ್ ಎರಡನೇ ಅಲೆ ವೇಗವಾಗಿ ಹರಡುತ್ತಿರುವ ಕಾರಣ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸರ್ಕಾರ ಸೂಚನೆ ನೀಡಿದೆ. ಈ ಹಿನ್ನೆಲೆ ಕೊಪ್ಪಳ ನಗರದಲ್ಲಿ ಖುದ್ದು ಉಪವಿಭಾಗಾಧಿಕಾರಿ ಫೀಲ್ಡಿಗಿಳಿದು ಮಾಸ್ಕ್ ಹಾಕದೆ ಓಡಾಡುತ್ತಿದ್ದವರಿಗೆ ದಂಡ ವಿಧಿಸಿದ್ದಾರೆ.
ಉಪವಿಭಾಗಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಅವರು ನಗರದ ಜವಾಹರ ರಸ್ತೆ, ಗಡಿಯಾರ ಕಂಬ ಸರ್ಕಲ್, ಗಂಜ್ ಸರ್ಕಲ್, ಜೆಪಿ ಮಾರ್ಕೆಟ್ನಲ್ಲಿ ಸಂಚರಿಸಿ ಮಾಸ್ಕ್ ಹಾಕದೆ ಓಡಾಡುತ್ತಿದ್ದ ಜನರಿಗೆ ದಂಡ ಹಾಕಿ ಎಚ್ಚರಿಕೆ ನೀಡಿದರು. ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಸಾಮಾಜಿಕ ಅಂತರ ಕಾಪಾಡಿ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಳ್ಳುವಂತೆ ಜನರಿಗೆ ತಿಳುವಳಿಕೆ ನೀಡಿದರು. ಮಾಸ್ಕ್ ಧರಿಸದಿದ್ದರೆ ದಂಡ ಪಾವತಿಸಬೇಕಾಗುತ್ತದೆ ಎಂದು ಜನರಿಗೆ ಎಚ್ಚರಿಕೆ ಸಹ ನೀಡಿದರು.
ಇದನ್ನೂ ಓದಿ: ಹೊಸಪೇಟೆ: ಒಂದೇ ಗ್ರಾಮದ 57 ಜನರಿಗೆ ಕೊರೊನಾ ಸೋಂಕು
ದಂಡ ಹಾಕುತ್ತಿದ್ದ ಅಧಿಕಾರಿಗಳನ್ನು ಕಂಡು ಕೆಲವರು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದರು. ಆದರೂ ಸಹ ನಗರಸಭೆ ಹಾಗೂ ಪೊಲೀಸರ ಸಹಾಯದಿಂದ ದಂಡ ಹಾಕಿ ಎಚ್ಚರಿಕೆ ನೀಡಿದರು. ಎಸಿ ಅವರಿಗೆ ನಗರಸಭೆ ಪೌರಾಯುಕ್ತ ಮಂಜುನಾಥ ತಳವಾರ, ನಗರ ಠಾಣೆಯ ಪಿಐ ಮಾರುತಿ ಗುಳ್ಳಾರಿ ಅವರು ಸಾಥ್ ನೀಡಿದರು.