ಕುಷ್ಟಗಿ : ಟೋಲ್ ಗೇಟ್ನಲ್ಲಿ ಫಾಸ್ಟ್ಯಾಗ್ ಕಡ್ಡಾಯಗೊಳಿಸಿದ ಹಿನ್ನೆಲೆ, ಮಾಹಿತಿ ಕೊರತೆಯಿಂದ ವಾಹನ ಸವಾರರು ದುಪ್ಪಟ್ಟು ಹಣ ಕಟ್ಟಿ ಚಡಪಡಿಸಿದರು.
ಕುಷ್ಟಗಿಯ ಇಳಕಲ್ ಕೆ. ಬೋದೂರು ತಾಂಡಾದ ಬಳಿಯ ವಣಗೇರಾ ಟೋಲ್ ಪ್ಲಾಝಾದಲ್ಲಿ ಫಾಸ್ಟ್ಯಾಗ್ ಅಳವಡಿಸಿಕೊಂಡವರಿಗೆ ಮಾತ್ರ ಸಂಚರಿಸಲು ಅವಕಾಶ ನೀಡಿ, ಫಾಸ್ಟ್ಯಾಗ್ ಇಲ್ಲದವರಿಂದ ದುಪ್ಪಟ್ಟು ಹಣ ವಸೂಲಿ ಮಾಡಲಾಯಿತು. ಟೋಲ್ ಸಿಬ್ಬಂದಿಯ ಕ್ರಮಕ್ಕೆ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದರು.
ಕೆಲ ವಾಹನ ಸವಾರರು ಸ್ಥಳದಲ್ಲೇ ಫಾಸ್ಟ್ಯಾಗ್ ಮಾಡಿಸಿದರೆ, ಇನ್ನೂ ಕೆಲವರು ದಾಖಲೆ ಹೊಂದಿಸಲಾಗದೆ ದುಪ್ಪಟ್ಟು ಶುಲ್ಕ ಪಾವತಿಸಿ ತೆರಳಿದರು. ಫಾಸ್ಟ್ಯಾಗ್ ಇಲ್ಲದವರಿಗೆ ಒಂದೇ ಗೇಟಿನ ವ್ಯವಸ್ಥೆ ಮಾಡಿದ್ದರಿಂದ, ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು. ಇದರಿಂದ ವಾಹನ ಸವಾರರು ಸಂಕಷ್ಟ ಅನುಭವಿಸುವಂತಾಯಿತು.
ಓದಿ : ಕೇರಳದಿಂದ ರಾಜ್ಯಕ್ಕೆ ಬರುವವರಿಗೆ ಆರ್‌ಟಿ-ಪಿಸಿಆರ್ ಟೆಸ್ಟ್ ಕಡ್ಡಾಯ: ಸರ್ಕಾರದ ಕಟ್ಟುನಿಟ್ಟಿನ ಆದೇಶ
ಕೆಲ ವಾಹನ ಸವಾರರಲ್ಲಿ ಫಾಸ್ಟ್ಯಾಗ್ ಇದ್ದರೂ ತಾಂತ್ರಿಕ ಸಮಸ್ಯೆಯಿಂದ ಗಂಟೆಗಟ್ಟಲೆ ಕಾಯುವಂತಾಯಿತು. ಇನ್ನೂ ಕೆಲವರು ಫಾಸ್ಟ್ಯಾಗ್ ಇದ್ದರೂ, ಅದನ್ನು ಬಳಸದೇ ಹೆಣಗಾಡಿದರು. ಕೆಲ ವಾಹನಗಳ ಮೇಲಿನ ಫಾಸ್ಟ್ಯಾಗ್ ಕೋಡ್ಗೆ ಗೀಚು ಬಿದ್ದಿದ್ದರಿಂದ ಬೇರೆ ಕೋಡ್ ಅಳವಡಿಸಿಕೊಂಡು ಮುಂದೆ ಸಾಗಿದರು.
ಫಾಸ್ಟ್ಯಾಗ್ ಆರಂಭದ ದಿನವೇ ವಾಹನ ಚಾಲಕರಿಗೆ ಬಿಸಿ ಮುಟ್ಟಿಸಿದ್ದು, ಕೇಂದ್ರ ಸರ್ಕಾರದ ವಿರುದ್ದ ಜನ ಆಕ್ರೋಶ ವ್ಯಕ್ತಪಡಿಸಿದರು.