ಗಂಗಾವತಿ(ಕೊಪ್ಪಳ): ಕೃಷಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್ ಅವರು ಇಲ್ಲಿನ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವಸರದಲ್ಲಿ ಕಾರನ್ನೇರಿ ಹೊರಡಲು ಮುಂದಾಗುತ್ತಿದ್ದಂತೆ ಕೆಲ ರೈತ ಮುಖಂಡರು ಸಚಿವರನ್ನು ತಡೆದು ನಿಲ್ಲಿಸಿ ಬಾಕಿ ಹಣ ಕೇಳಿದ ಘಟನೆ ನಗರದಲ್ಲಿ ನಡೆಯಿತು.
ಉಪ ವಿಭಾಗ ಆಸ್ಪತ್ರೆಗೆ ಭೇಟಿ ನೀಡಿದ್ದ ಸಚಿವರು, ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಬಳಿಕ ಪತ್ರಕರ್ತರೊಂದಿಗೆ ಔಪಚಾರಿಕ ಮಾತನಾಡಿ ಹೊರಡಲು ಸಜ್ಜಾದರು. ಈ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿದ ರೈತಪರ ಸಂಘಟನೆಗಳ ಮುಖಂಡರು, ಸಚಿವರನ್ನು ತಡೆದು ನಿಲ್ಲಿಸಿ ರೈತರಿಗೆ ಬರಬೇಕಿರುವ 1,400 ಕೋಟಿ ಮೊತ್ತದ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.
ಖರೀದಿ ಕೇಂದ್ರದ ಮೂಲಕ ಜೋಳ, ಭತ್ತ ಮೊದಲಾದ ಧಾನ್ಯ ಖರೀದಿಸಲಾಗಿದೆ. ನಾಲ್ಕು ತಿಂಗಳಾದರೂ ರೈತರಿಗೆ ಹಣ ಸಂದಾಯವಾಗಿಲ್ಲ. ಕೂಡಲೇ ಹಣ ಬಿಡುಗಡೆ ಮಾಡಬೇಕು. ರೈತರ ಶೋಷಣೆ ತಪ್ಪಿಸಬೇಕು ಎಂದು ಆಗ್ರಹಿಸಿದರು.