ಕೊಪ್ಪಳ: ತಾಡಪತ್ರಿಗಾಗಿ ರೈತರು ಮುಗಿಬಿದ್ದ ಘಟನೆ ಜಿಲ್ಲೆಯ ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟಾ ರೈತ ಸಂಪರ್ಕ ಕೇಂದ್ರದ ಮುಂದೆ ನಡೆದಿದೆ.
ಈ ಸಂದರ್ಭದಲ್ಲಿ ರೈತ ಸಂಪರ್ಕ ಕೇಂದ್ರದ ಅಧಿಕಾರಿಯನ್ನು ರೈತರು ಎಳೆದಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ತಾಡಪತ್ರಿ ವಿತರಣೆ ಮಾಡಿರುವ ಕುರಿತಂತೆ ಎರಡು ದಿನ ಮುಂಚಿತವಾಗಿ ಆ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯ ಗ್ರಾಮಗಳಲ್ಲಿ ಮಾಹಿತಿ ನೀಡಲಾಗಿತ್ತು.
ಇದರಿಂದ ನಿನ್ನೆ ರಾತ್ರಿಯೇ ನೂರಾರು ರೈತರು ಬಂದು ರೈತ ಸಂಪರ್ಕ ಕೇಂದ್ರದ ಮುಂದೆ ತಾಡಪತ್ರಿ ಪಡೆಯಲು ಕ್ಯೂ ನಿಂತಿದ್ದರು. ಬೆಳಗ್ಗೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಜಮಾಯಿಸಿದ್ದರು. ಪೂರೈಕೆಯಾಗಿದ್ದ 500 ತಾಡಪತ್ರಿಗಳನ್ನು ಪಡೆಯಲು ಬಂದಿದ್ದ ರೈತರನ್ನು ಕಂಡು ರೈತ ಸಂಪರ್ಕ ಕೇಂದ್ರದ ಅಧಿಕಾರಿ ಹೌಹಾರಿದ್ದಾರೆ. ರೈತರ ನೂಕುನುಗ್ಗಲು ಉಂಟಾಗಿದೆ.
ಈ ಸಂದರ್ಭದಲ್ಲಿ ರೈತರು ಹಾಗೂ ರೈತ ಸಂಪರ್ಕ ಕೇಂದ್ರದ ಅಧಿಕಾರಿಯ ನಡುವೆ ಮಾತಿನ ಚಕಮಕಿ ನಡೆದಿದೆ. ಈ ನಡುವೆ ರೈತರನ್ನು ಸಮಾಧಾನಪಡಿಸಲು ಪೊಲೀಸರು ನಡೆಸಿದ ಯತ್ನ ವಿಫಲವಾಯಿತು. ಆಕ್ರೋಶಗೊಂಡ ರೈತರು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು ಎಳೆದಾಡಿದ ಘಟನೆಯೂ ಈ ಸಂದರ್ಭದಲ್ಲಿ ನಡೆಯಿತು ಎಂದು ತಿಳಿದು ಬಂದಿದೆ.