ಕುಷ್ಟಗಿ(ಕೊಪ್ಪಳ): ತೊಗರಿ ಬೆಂಬಲ ಬೆಲೆಗೆ ರಾಜ್ಯ ಸರ್ಕಾರದ ಪಾಲಿನ ಪ್ರತಿ ಕ್ವಿಂಟಲ್ಗೆ 500 ರೂ. ನೀಡಬೇಕೆಂದು ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ನಜೀರಸಾಬ್ ಮೂಲಿಮನಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಮನವಿ ಸಲ್ಲಿಸಿದರು.
ತಾಲೂಕಿನ ಬಸಾಪೂರ ಏರ್ಸ್ಟ್ರಿಪ್ನಿಂದ ಕೊಪ್ಪಳದಲ್ಲಿ ನಿರ್ಮಾಣವಾಗುತ್ತಿರುವ ಆಟಿಕೆ ವಸ್ತುಗಳ ಕೈಗಾರಿಕೆ ಭೂಮಿ ಪೂಜೆಗೆ ಸಿಎಂ ತೆರಳುತ್ತಿದ್ದರು. ಈ ವೇಳೆ, ಬಸಾಪೂರ ಕ್ರಾಸ್ನಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ನಜೀರಸಾಬ್ ಮೂಲಿಮನಿ ಅವರು ಮುಖ್ಯಮಂತ್ರಿಗೆ ಈ ಕುರಿತಂತೆ ಮನವಿ ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಸಿಎಂ ಮನವಿ ಸ್ವೀಕರಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧ್ಯಕ್ಷ ನಜೀರಸಾಬ್ ಮೂಲಿಮನಿ ಅವರು, ಪ್ರಸಕ್ತ ವರ್ಷದ ತೊಗರಿ ಬೆಂಬಲ ಬೆಲೆಗೆ ಕೇಂದ್ರ ಸರ್ಕಾರ ಪ್ರತಿ ಕ್ವಿಂಟಲ್ಗೆ 6ಸಾವಿರ ರೂ. ನಿಗದಿಗೊಳಿಸಿದೆ. ಆದರೆ, ರಾಜ್ಯ ಸರ್ಕಾರದಿಂದ ಯಾವುದೇ ಪ್ರೋತ್ಸಾಹ ಧನ ಇಲ್ಲದೇ ತೊಗರಿ ಬೆಳೆಗಾರರ ಆನ್ಲೈನ್ ನೋಂದಣಿ ಕಾರ್ಯ ನಡೆದಿದೆ. ಸರ್ಕಾರದ ಪ್ರೋತ್ಸಾಹ ಧನ ಪ್ರತಿ ಕ್ವಿಂಟಲ್ಗೆ 500 ರೂ. ಹೆಚ್ಚಿಸಬೇಕು. ಕಳೆದ ಬಾರಿ ರಾಜ್ಯ ಸರ್ಕಾರ ತನ್ನ ಪಾಲಿನ 300 ರೂ. ನೀಡಿತ್ತು. ಇದೀಗ 500 ರೂ.ಗೆ ಹೆಚ್ಚಿಸಿ ಗುಣಮಟ್ಟದ ತೊಗರಿ ಉತ್ಪನ್ನಕ್ಕೆ ಗುಣಮಟ್ಟದ ಬೆಲೆ ನೀಡಬೇಕು ಎಂದು ಮನವಿ ಮಾಡಿರುವುದಾಗಿ ತಿಳಿಸಿದರು.
ಕುಷ್ಟಗಿಯಲ್ಲಿದ್ದ ಸಣ್ಣ ನೀರಾವರಿ ಇಲಾಖೆ ವಿಭಾಗೀಯ ಕಚೇರಿಯನ್ನು ಪುನಃ ಕುಷ್ಟಗಿಗೆ ಸ್ಥಳಾಂತರಿಸಬೇಕು. ಕೃಷ್ಣ ಬಿ ಸ್ಕೀಂ ಕೊಪ್ಪಳ ಏತ ನೀರಾವರಿ ಯೋಜನೆ ಆಮೆಗತಿಯಲ್ಲಿದ್ದು, ತ್ವರಿತಗತಿಯಲ್ಲಿ ಹಾಗೂ ಬಾಕಿ ಅನುದಾನ ಪ್ರಸಕ್ತ ಬಜೆಟ್ನಲ್ಲಿ ಮೀಸಲಿರಬೇಕು.
ಇದೇ ವೇಳೆ, ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ವೀರೇಶ ಬಂಗಾರಶೆಟ್ಟರ್ ಅವರು, ಕುಷ್ಟಗಿಯ ಶತಮಾನದ ಅಂಚಿನಲ್ಲಿದ್ದ ನಿಜಾಂ ಕಾಲದ ಐತಿಹಾಸಿಕ ಕಟ್ಟಡವಾಗಿರುವ ಪೊಲೀಸ್ ಠಾಣೆಯನ್ನು ನೆಲಸಮಗೊಳಿಸದೇ ಸ್ಮಾರಕವಾಗಿ ಉಳಿಸುವಂತೆ ಮನವಿ ಸಲ್ಲಿಸಿದರು. ಈ ವೇಳೆ ವೀರೇಶ್ ಕರಡಿ, ಸುಬಾನಿ ಆರ್.ಟಿ., ಬಸವರಾಜ್ ಗಾಣಗೇರ ಇದ್ದರು.