ಕುಷ್ಟಗಿ (ಕೊಪ್ಪಳ) : ಸಾಮಾನ್ಯವಾಗಿ ಮೆಕ್ಕೆಜೋಳಕ್ಕೆ ಲಗ್ಗೆ ಇಡುವ 'ಹುಸಿ ಸೈನಿಕ ಹುಳು' ಇದೀಗ ಬಿಳಿಜೋಳಕ್ಕೆ ತಗುಲಿ ಅನ್ನದಾತರನ್ನು ಅಕ್ಷರಶಃ ಸಂಕಷ್ಟಕ್ಕೆ ಸಿಲುಕಿಸಿದೆ.
ಉತ್ತರ ಕರ್ನಾಟಕ ರೈತಾಪಿ ವರ್ಗದ ಭರವಸೆ ಬೆಳೆ ಬಿಳಿಜೋಳ. ಇದನ್ನು' ರೋಗ ರಹಿತ ಬೆಳೆ' ಎನ್ನಲಾಗುತ್ತೆ. ಇದಕ್ಕೆ ಕೀಟ ಬಾಧೆ ಆವರಿಸುವುದು ಅಪರೂಪ. ತಾಲೂಕಿನಲ್ಲಿ ಆದ ಹೆಚ್ಚು ಮಳೆಯಿಂದ 8,500 ಹೆಕ್ಟೇರ್ ಪ್ರದೇಶದಲ್ಲಿ ಅದರಲ್ಲೂ ಕುಷ್ಟಗಿ, ತಾವರಗೇರಾ, ಹನುಮಸಾಗರದಲ್ಲಿ ಬಿಳಿ ಜೋಳ ಬೆಳೆಯಲಾಗಿದೆ. ಉತ್ತಮ ಬೆಳೆಗೆ ಹುಸಿ ಸೈನಿಕ ಹುಳು ಕೀಟ ವಕ್ಕರಿಸಿದ್ದು, ರೈತರನ್ನು ಕಂಗೆಡಿಸಿದೆ.
ಸಾಮಾನ್ಯವಾಗಿ 45 ದಿನಗಳೊಳಗಿನ ಬೆಳೆಗೆ ಇದರ ಕಾಟ ಹೆಚ್ಚು. ಮೇಲ್ನೋಟಕ್ಕೆ ಸಮೃದ್ಧವಾಗಿ ಬೆಳೆ ನಳ- ನಳಿಸುವಂತೆ ಕಂಡರೂ ಬೆಳೆಯ ಎಲೆಯ (ರವದಿ) ಭಾಗ ರಂಧ್ರ ರಂಧ್ರವಾಗಿ ಹರಿದಿರುವಂತೆ ಹಾಗೂ ಬೆಳೆಯ ಸುಳಿಯ ಭಾಗದಲ್ಲಿ ಲದ್ದಿ ಕಾಣಬಹುದಾಗಿದೆ. ಇದರಿಂದಾಗಿ ಎಲೆ ಹಳದಿ ವರ್ಣಕ್ಕೆ ತಿರುಗುವುದನ್ನು ಗುರುತಿಸಬಹುದಾಗಿದೆ. ಸಮ್ಮಿಶ್ರ ಬೆಳೆಗಳಾದ ಸೂರ್ಯಕಾಂತಿ, ಕಡಲೆ, ಕುಸುಬೆ ಇತ್ಯಾದಿ ಬೆಳೆಗೆ ದಾಳಿ ಮಾಡುವುದಿಲ್ಲ, ಹುಲ್ಲು ಜಾತಿಯ ಸಸ್ಯಗಳಾದ ಮೆಕ್ಕೆಜೋಳ ಗೋಧಿ, ಕಬ್ಬು, ಸಜ್ಜೆ ಬೆಳೆಗೆ ಇದರ ಕಾಟ ಹೆಚ್ಚು.
ಕೃಷಿ ಅಧಿಕಾರಿಗಳ ಸಲಹೆ ಏನು ? : ಹಿಂಗಾರು ಹಂಗಾಮಿನ ಬಿಳಿಜೋಳ, ಗೋಧಿಗೆ ಇದರ ಕಾಟ ತಪ್ಪಿಸಲು ಬಿಳಿಜೋಳ ಬಿತ್ತನೆ ವೇಳೆ ಜಮೀನು ಸುತ್ತಲು ಮೂರ್ನಾಲ್ಕು ಸಾಲು ಮೆಕ್ಕೆಜೋಳ ಬಿತ್ತನೆ ಮಾಡಿ, ಮಧ್ಯಭಾಗ ಬಿಳಿ ಜೋಳ ಬಿತ್ತಿದರೆ ಜೀವಂತ ಬೇಲಿ ನಿರ್ಮಿಸಿದಂತಾಗುತ್ತದೆ.
ಇದರಿಂದ ಹುಸಿ ಸೈನಿಕ ಹುಳು ಮೆಕ್ಕೆಜೋಳ ಪೈರು ತಿನ್ನುತ್ತದೆ. ಇದನ್ನು ತಿಂದು ಬಿಳಿ ಜೋಳ ಬೆಳೆಗೆ ದಾಳಿ ಇಡುವಷ್ಟರಲ್ಲಿ ಈ ಹುಳುವಿನ ಜೀವನ ಚಕ್ರ ಮುಗಿಯುತ್ತದೆ. ಈ ಐಡಿಯಾವನ್ನು ಪ್ರತಿ ರೈತರು ಪ್ರಯೋಗಿಸಿದ್ದೇ ಆದಲ್ಲಿ ಈ ಕೀಟ ಬಾಧೆಯನ್ನು ಸಂಪೂರ್ಣ ಖರ್ಚಿಲ್ಲದೇ ನಿಯಂತ್ರಿಸಲು ಸಾಧ್ಯ ಅಂತಾರೆ ಕೃಷಿ ಅಧಿಕಾರಿ ರಾಘವೇಂದ್ರ ಕೊಂಡಗುರಿ.
ನಿಯಂತ್ರಣ ಕ್ರಮ : ಹಿಂಗಾರಿನ ಜೋಳಕ್ಕೆ ಬಂದಿರುವ ಹುಸಿ ಸೈನಿಕ ಹುಳು (fall army worm)ಕೀಟ ನಿಯಂತ್ರಣಕ್ಕೆ ಪ್ರೋಪೆನೊಫಾಸ್ ಶೇ.50ಇಸಿ 2ಮಿಲಿ ಅಥವಾ ಇಮಾಮೆಕ್ಟಿಮ್ ಬೆಂಜೋಯೆಟ್ ಶೇ. ಎಸ್ ಜಿ 0.4 ಗ್ರಾಂ ಅಥವಾ ಸ್ಪೈನೋಸೈಡ್ ಶೇ. 17ಎಸ್‌ಸಿ 0.5 ಮಿಲಿ ಅಥವಾ ಕ್ಲೋರಾಂತ್ರೊನಿಲಪ್ರೊಲ್ ಶೇ.18.5 ಎಸ್‌ಸಿ 0.4 ಮಿಲಿ ಅಥವಾ ಬೇವಿನ ಎಣ್ಣೆ 1500 ಪಿಪಿಎಂ 5 ಮಿಲಿ ಅಥವಾ 10,000ಪಿಪಿಎಂ 2 ಮಿಲಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವುದರಿಂದ ನಿಯಂತ್ರಿಸಬಹುದಾಗಿದೆ.