ಕೊಪ್ಪಳ : ಜಿಲ್ಲೆಯ ಯಲಬುರ್ಗಾ ತಾಲೂಕಿನ ಹಿರೇವಡ್ರಕಲ್ ಗ್ರಾಮದಲ್ಲಿ ಹಮ್ಮಿಕೊಂಡಿದ್ದ 'ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ' ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡುವ ಕಾರ್ಯ ಮಾಡಿದರು.
ಮುಖ್ಯವಾಗಿ ಕಂದಾಯ ಸೇರಿ ಇತರೆ ಇಲಾಖೆಗಳ ಯೋಜನೆ ಹಾಗೂ ವಿವಿಧ ಕೆಲಸಗಳಿಗೆ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸಾಧ್ಯವಾದಷ್ಟು ಸ್ಥಳದಲ್ಲೇ ಪರಿಹರಿಸುವ ಉದ್ದೇಶದೊಂದಿಗೆ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮವನ್ನು ಡಿಸಿ ಉದ್ಘಾಟಿಸಿ ಅಧಿಕಾರಿಗಳ ಸಭೆ ನಡೆಸಿದರು.
ಜನರಿಗೆ ಜಿಲ್ಲಾ ಮತ್ತು ತಾಲೂಕ ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಸಿಬ್ಬಂದಿ ಸರ್ಕಾರಿ ಸೌಲಭ್ಯಗಳ ಮಾಹಿತಿ ನೀಡಿದರು. ಜೊತೆಗೆ ಅವರು ನೀಡಿದ ಅರ್ಜಿಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗಳು ಹೇಳಿದರು.
ಕೃಷಿ, ತೋಟಗಾರಿಕೆ, ಕಂದಾಯ, ಆರೋಗ್ಯ ಹಾಗೂ ಇತರೆ ಇಲಾಖೆಗೆ ಸಂಬಂಧಿಸಿದ ಜನರ ಸಮಸ್ಯೆಗಳಿಗೆ ಇಂದೇ ಪರಿಹಾರ ನೀಡಬೇಕು ಎಂದು ಅಧಿಕಾರಿಗಳಿಗೆ ಆದೇಶಿಸಿದರು.
ಸಾರಿಗೆ ವ್ಯವಸ್ಥೆ ಬಗ್ಗೆ ಸಂಬಂಧಿಸಿದ ಅಧಿಕಾರಿಗಳನ್ನು ವಿಚಾರಿಸಿದ ಜಿಲ್ಲಾಧಿಕಾರಿಗಳು, ಇಂದೇ ಗ್ರಾಮಕ್ಕೆ ಬಸ್ ಬರುವಂತಾಗಬೇಕು ಮತ್ತು ಅದಕ್ಕೆ ಸರಿಯಾದ ಸಮಯ ನಿಗದಿಪಡಿಸಿ ಜನರಿಗೆ ಅನುಕೂಲವಾಗುವ ರೀತಿ ಬಸ್ ಸಂಚಾರ ವ್ಯವಸ್ಥೆ ಮಾಡುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸಿಇಒ ರಘುನಂದನ ಮೂರ್ತಿ, ಉಪ ವಿಭಾಗಾಧಿಕಾರಿ ನಾರಾಯಣ ರೆಡ್ಡಿ ಕನಕರೆಡ್ಡಿ ಸೇರಿ ಮೊದಲಾದವರು ಉಪಸ್ಥಿತರಿದ್ದರು.