ಗಂಗಾವತಿ: ಮಾಜಿ ಸಚಿವ ಶಿವರಾಜ ತಂಗಡಗಿ ಅತ್ಯಾಪ್ತ ಬೆಂಬಲಿಗನೊಬ್ಬ ಗ್ರಾಮ ಪಂಚಾಯಿತಿ ಚುನಾವಣೆ ಬಯಸಿ ಸಲ್ಲಿಸಿದ್ದ ನಾಮಪತ್ರ ತಿರಸ್ಕಾರವಾಗಿದ್ದು, ಎದುರಾಳಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗೆದ್ದು ಬೀಗಿದ ಘಟನೆ ತಾಲೂಕಿನ ಜಂಗಮರ ಕಲ್ಗುಡಿಯಲ್ಲಿ ನಡೆದಿದೆ.
ಮಾಜಿ ಸಚಿವ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶಿವರಾಜ ತಂಗಡಗಿಯ ಅತ್ಯಾಪ್ತ ಬೆಂಬಲಿಗ ಕಾಂಗ್ರೆಸ್ ಮುಖಂಡ ವಿ.ಪ್ರಸಾದ್, ಹಿಂದುಳಿದ ವರ್ಗಕ್ಕೆ ಮೀಸಲಾಗಿದ್ದ ಗ್ರಾಮ ಪಂಚಾಯಿತಿಯ ಮೂರನೇ ವಾರ್ಡ್ನಿಂದ ಕಾಂಗ್ರೆಸ್ ಬೆಂಬಲಿತ ಸದಸ್ಯನಾಗಿ ಕಣಕ್ಕೆ ಇಳಿದಿದ್ದರು.
ಓದಿ...ಒಮ್ಮೆಯೂ ಸೋಲಿಲ್ಲ: ಐದು ದಶಕಗಳಿಂದ ಸತತ ಸ್ಪರ್ಧೆ
ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಮೈಲಾರಪ್ಪ ದೊಡ್ಡಪ್ಪ ಎಂಬುವವರು ಕಣಕ್ಕೆ ಇಳಿದಿದ್ದರು. ಪ್ರಸಾದ್ 20 ಎಕರೆಗಿಂತಲೂ ಅಧಿಕ ಪ್ರಮಾಣದ ನೀರಾವರಿ ಜಮೀನು ಹೊಂದಿದ್ದು, ಆದಾಯ ತೆರಿಗೆದಾರರಾಗಿದ್ದಾರೆ. ಅಲ್ಲದೇ ಕಮ್ಮಾ ಜನಾಂಗಕ್ಕೆ ಸೇರಿದ್ದು, ಹಿಂದುಳಿದ ವರ್ಗದ ಪ್ರಮಾಣ ಪತ್ರ ಸಲ್ಲಿಸಿರುತ್ತಾರೆ ಎಂದು ಮೈಲಾರಪ್ಪ ದೂರು ನೀಡಿದ್ದರು.
ಇದನ್ನು ಪರಿಶೀಲಿಸಿದ ತಹಶೀಲ್ದಾರ್ ಎಂ. ರೇಣುಕಾ, ಮರಳಿ ಕಂದಾಯ ಅಧಿಕಾರಿಯ ವರದಿ ಪಡೆದು ತಕ್ಷಣದಿಂದ ಜಾರಿಗೆ ಬರುವಂತೆ ಜಾತಿ ಪ್ರಮಾಣಪತ್ರ ರದ್ದು ಮಾಡಿದ್ದಾರೆ. ಈ ಹಿನ್ನೆಲೆ ಗ್ರಾಮದ 3ನೇ ವಾರ್ಡ್ಗೆ ಪ್ರತಿಸ್ಪರ್ಧೆ ಇಲ್ಲದೇ ಮೈಲಾರಪ್ಪ ಗೆಲುವು ಸಾಧಿಸಿದ್ದಾರೆ.