ಕೊಪ್ಪಳ: ಸಿದ್ದರಾಮಯ್ಯ ಸಿಎಂ ಆಗಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ನನಗೂ ಸಿಎಂ ಆಗಿ ಎನ್ನುತ್ತಾರೆ. ಆದರೆ ನಾನು ಯಾರ ಜೊತೆಗೂ ಆ ಬಗ್ಗೆ ಹೇಳಿಸಿಲ್ಲ ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಹೇಳಿದ್ದಾರೆ.
ಕೊಪ್ಪಳದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಯರಡ್ಡಿ, ಸಿದ್ದರಾಮಯ್ಯ ಸಿಎಂ ಆಗಿದ್ದವರು, ಹೀಗಾಗಿ ಅವರ ಹೆಸರು ಹೇಳಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಲಿ ಎಂಬುದು ನನ್ನ ಅಭಿಪ್ರಾಯ. ವೈಯಕ್ತಿಕ ಅಭಿಪ್ರಾಯ ಹೇಳುವುದರಲ್ಲಿ ತಪ್ಪೇನಿಲ್ಲ. ಆದರೆ ಈ ರೀತಿಯ ಹೇಳಿಕೆಗಳಿಂದ ಪಕ್ಷದಲ್ಲಿ ಗೊಂದಲ ಮೂಡುತ್ತದೆ ಎಂಬ ಕಾರಣಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಆ ರೀತಿ ಯಾರು ಹೇಳಿಕೆ ನೀಡಬೇಡಿ ಎಂದಿದ್ದಾರೆ. ಅವರ ಹೇಳಿಕೆಯನ್ನೂ ನಾನು ಸ್ವಾಗತಿಸುತ್ತೇನೆ ಎಂದರು. ಪಕ್ಷ ಏನು ತೀರ್ಮಾನ ತೆಗೆದುಕೊಳ್ಳುತ್ತದೆಯೋ ಅದನ್ನು ನಾವು ಒಪ್ಪುತ್ತೇವೆ. ನಮ್ಮಲ್ಲಿ ಯಾವ ಗುಂಪು ಇಲ್ಲ, ನಮ್ಮದು ಒಂದೇ ಗುಂಪು ಎಂದು ಹೇಳಿದ್ರು.
ರಾಜ್ಯದಲ್ಲಿ ಸಿಎಂ ಪುತ್ರ ವಿಜಯೇಂದ್ರನ ಆಡಳಿತವಿದೆ. ಯೋಗೇಶ್ವರ್, ಬಸನಗೌಡ ಪಾಟೀಲದ ಯತ್ನಾಳ, ಎಚ್. ವಿಶ್ವನಾಥ್ ಅವರು ಮುಖ್ಯಮಂತ್ರಿಯೇ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂಬ ಆರೋಪ ಮಾಡುತ್ತಿದ್ದಾರೆ. ಅವರ ಪಕ್ಷದಲ್ಲಿ ಶಿಸ್ತು ಇಲ್ಲ. ಅವರ ಮುಖ್ಯಮಂತ್ರಿಗಳ ವಿರುದ್ಧ ಅವರ ಪಕ್ಷದವರೇ ಮಾತನಾಡುತ್ತಾರೆ. ಆದರೂ ಯಾಕೆ ಕ್ರಮ ಕೈಗೊಂಡಿಲ್ಲ. ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಇಳಿಸುತ್ತಿಲ್ಲ. ಇಂತಹ ಸರ್ಕಾರ ಯಾವಾಗಲೂ ಇರಲಿಲ್ಲ. ವೈಯಕ್ತಿಕವಾಗಿ ನಾನು ಯಡಿಯೂರಪ್ಪ ಸಿಎಂ ಆಗಿರಲಿ ಎನ್ನುತ್ತೇನೆ. ಆದರೆ ನಿರ್ಧರಿಸುವುದು ಅವರ ಪಕ್ಷದವರು ಎಂದ್ರು.
ಇನ್ನು ಕೂಸು ಹುಟ್ಟುವ ಮೊದಲೇ ಕಾಂಗ್ರೆಸ್ನವರು ಕುಲಾಯಿ ಹೊಲಿಸುತ್ತಿದ್ದಾರೆ ಎಂಬ ಬಿಜೆಪಿ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಯರಡ್ಡಿ, ನಮಗೆ ಗೊತ್ತಿದೆ ಮುಂದಿನ ಬಾರಿ ನಮಗೆ ಮಕ್ಕಳು ಹುಟ್ಟುತ್ತವೆ. ಅದಕ್ಕಾಗಿ ನಾವು ಈಗ ಕುಲಾಯಿ ಹೊಲಿಸುತ್ತಿದ್ದೇವೆ. ಆದರೆ ಗೊಂದಲವಾಗಬಾರದು ಎಂಬ ಕಾರಣಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಯನ್ನು ಸ್ವಾಗತಿಸುತ್ತೇನೆ ಎಂದು ಪುನರುಚ್ಛರಿಸಿದರು.