ಕುಷ್ಟಗಿ (ಕೊಪ್ಪಳ): ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧವಾಗಿದ್ದು, ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಅನ್ವಯ ಪ್ರತಿಯೊಬ್ಬ ಅಧಿಕಾರಿಗೂ ಬಾಲ್ಯ ವಿವಾಹ ತಡೆಯುವ ಅಧಿಕಾರವಿದೆ ಎಂದು ತಹಶೀಲ್ದಾರ್ ಎಂ.ಸಿದ್ದೇಶ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ, ತಾ.ಪಂ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಇವರ ಸಹಯೋಗದಲ್ಲಿ ನಡೆದ ಸಭೆಯಲ್ಲಿ ಬಾಲ್ಯ ವಿವಾಹ ನಡೆಯುವುದು ಅಧಿಕಾರಿಗಳ ಗಮನಕ್ಕೆ ಕಂಡು ಬಂದರೆ ಬಾಲ್ಯ ವಿವಾಹಗಳನ್ನು ತಡೆಯಬೇಕು. ಬಾಲ್ಯ ವಿವಾಹದ ಬಗ್ಗೆ ಯಾವುದೇ ಮಾಹಿತಿ ದೊರೆತರೂ ಅಧಿಕಾರಿಗಳು ಕೂಡಲೇ ಸ್ಪಂದಿಸಿ, ಅದನ್ನು ತಡೆಯಲು ಮುಂದಾಗಬೇಕು ಎಂದರು.
ಬಾಲ್ಯ ವಿವಾಹಗಳನ್ನು ತಡೆಯುವಲ್ಲಿ ಎಲ್ಲ ಇಲಾಖೆಗಳಿಗೆ ಮಹತ್ವದ ಪಾತ್ರವಿದೆ. ಪ್ರಮುಖವಾಗಿ ಮಹಿಳಾ ಮತ್ತು ಮಕ್ಕಳ ಇಲಾಖೆಯು ಸಿಡಿಪಿಒ, ಮೇಲ್ವಿಚಾರಕರ ಜೊತೆಯಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಕೈ ಜೋಡಿಸಿದರೆ ಮಾತ್ರ ಬಾಲ್ಯ ವಿವಾಹ ಮುಕ್ತ ತಾಲೂಕು ಹಾಗೂ ಗ್ರಾಮವನ್ನಾಗಿ ಮಾಡಬಹುದು ಎಂದು ತಹಶೀಲ್ದಾರ್ ಹೇಳಿದರು.
ಸಿಡಿಪಿಒ ಜಯಶ್ರೀ ರಾಜಪುರೋಹಿತ ಮಾತನಾಡಿ, ಬಾಲ್ಯ ವಿವಾಹದಿಂದ ಅಪ್ರಾಪ್ತ ವಯಸ್ಸಿನಲ್ಲಿ ಗರ್ಭಣಿಯಾಗಿ ಹೆರಿಗೆ ಸಮಯದಲ್ಲಿ ತಾಯಿ ಮತ್ತು ಶಿಶು ಅಕಾಲಿಕ ಮರಣಕ್ಕೆ ತುತ್ತಾಗುತ್ತಾರೆ. ಬಾಲ್ಯ ವಿವಾಹಕ್ಕೆ ಒಳಗಾದ ಮಕ್ಕಳು ಮಾನಸಿಕ ದೌರ್ಬಲ್ಯತೆಗೆ ಒಳಗಾಗಿ ಮಾನಸಿಕ ಸ್ಥೈರ್ಯ ಕಳೆದುಕೊಳ್ಳುತ್ತಾರೆ. ಬಾಲ್ಯ ವಿವಾಹವು ಮಕ್ಕಳ ಭವಿಷ್ಯವನ್ನೇ ಅಂಧಕಾರಕ್ಕೆ ಸಿಲುಕಿಸುವ ಅನಾಗರಿಕ ಕಾರ್ಯವಾಗಿದೆ ಎಂದರು.
ಸಮಾಜ ಕಲ್ಯಾಣ ಇಲಾಖಾ ಅಧಿಕಾರಿ ದೇವಲ ನಾಯಕ, ಉಪ ನೋಂದಣಾಧಿಕಾರಿ ಪದ್ಮನಾಭ ಗುಡಿ, ಪುರಸಭೆಯ ಹುಲ್ಲಪ್ಪ ಮತ್ತಿತರಿದ್ದರು. ಇದೇ ವೇಳೆ, ಬಾಲ್ಯ ವಿವಾಹ ತಡೆ ಪೋಸ್ಟರ್ ಬಿಡುಗಡೆಗೊಳಿಸಲಾಯಿತು.