ಕೊಪ್ಪಳ : ಬಡವರಿಗೆ ಸೂರು ಕಲ್ಪಿಸುವ ಯೋಜನೆಯೊಂದು ಕೊಪ್ಪಳ ನಗರದ ಹೊರವಲಯದಲ್ಲಿ ನೆನೆಗುದಿಗೆ ಬಿದ್ದಿದೆ. 2012ರಲ್ಲಿ ರಾಜೀವ್ ಗಾಂಧಿ ಹೌಸಿಂಗ್ ಬೋರ್ಡ್ ಮೂಲಕ 2000 ಮನೆ ನಿರ್ಮಾಣ ಯೋಜನೆ ಕೈಗೊಳ್ಳಲಾಗಿತ್ತು. ನಗರ ಪ್ರದೇಶದ ವಸತಿ ರಹಿತರಿಗೆ ಸೂರು ಕಲ್ಪಿಸುವ ಯೋಜನೆ ಇದಾಗಿದೆ. ಫಲಾನುಭವಿಗಳಿಂದ 30 ಸಾವಿರ, ಸರ್ಕಾರದಿಂದ 70 ಸಾವಿರ ರೂಪಾಯಿ ಸಹಾಯಧನ ಮತ್ತು 1.10 ಲಕ್ಷ ರೂಪಾಯಿ ಬ್ಯಾಂಕ್ ಸಾಲದೊಂದಿಗೆ ಮನೆ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. ಅದರಂತೆ ಮನೆ ನಿರ್ಮಾಣ ಕಾಮಗಾರಿ ನಡೆದಿದೆಯಾದರೂ ಎಲ್ಲವೂ ಅರೆಬರೆಯಾಗಿದೆ.
ಮುಖ್ಯವಾಗಿ ಮೂಲಸೌಲಭ್ಯಗಳನ್ನು ಕಲ್ಪಿಸಲಾಗಿಲ್ಲ. ಕಟ್ಟಿರುವ ಮನೆಗಳು ಪಾಳು ಬಿದ್ದಿವೆ. ಕಳೆದ ವರ್ಷ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಲಾಗಿದೆ. ಫಲಾನುಭವಿಗಳ ವಂತಿಗೆ ಹಾಗೂ ಸರ್ಕಾರದ ಹಣ ಸೇರಿ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗಿದೆ. ಆದರೆ ದಶಕ ಕಳೆದರೂ ಫಲಾನುಭವಿಗಳಿಗೆ ಸೂರು ಸಿಗದಂತಾಗಿದೆ. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ನೆನೆಗುದಿಗೆ ಬಿದ್ದಿದೆ.
ಈ ಬಗ್ಗೆ ಫಲಾನುಭವಿ ಮೊಹಮ್ಮದ್ ಶಫಿ ಮಾತನಾಡಿ, ''ಸಿಂಧಗಿ ರಸ್ತೆಯಲ್ಲಿ 4200 ಕೋಟಿ ವೆಚ್ಚದಲ್ಲಿ ಆಶ್ರಯ ಮನೆಗಳ ನಿರ್ಮಾಣಕ್ಕೆ ಯೋಜನೆ ಕೈಗೊಳ್ಳಲಾಗಿತ್ತು. ಈಗಾಗಲೇ 2013ರಲ್ಲಿ ರಾಜೀವ್ ಗಾಂಧಿ ಹೌಸಿಂಗ್ ಬೋರ್ಡ್ನಲ್ಲಿ ನಿರ್ಮಿತಿ ಕೇಂದ್ರಕ್ಕೆ ಆದೇಶ ಕೊಟ್ಟರು. ನಿರ್ಮಿತಿ ಕೇಂದ್ರದವರು ಮಾಡಿದ್ರೂ ಅದಕ್ಕೆ ಲೇಔಟ್ ಅನುಮೋದನೆ ಇಲ್ಲ. ನಗರ ಪ್ರಾಧಿಕಾರದ ಅನುಮೋದನೆಯಿಂದ ಇವರೇ ಡೈರೆಕ್ಟ್ ಆಗಿ ರಸ್ತೆ ನಿರ್ಮಾಣ ಮಾಡುತ್ತಾರೆ. ಕಂಬ ತಾವೇ ಹಾಕುತ್ತಾರೆ. ಎಷ್ಟು ದುಡ್ಡು ರಿಲೀಸ್ ಆಗಿದೆ ಅಷ್ಟರಲ್ಲಿ ನಿರ್ಮಿಸಿ ಕೈತೊಳೆದುಕೊಂಡು ಬಿಡುತ್ತಾರೆ.
ಈಗ 12 ವರ್ಷ ಕಳೆಯಿತು. ಇನ್ನೂ ಅದರ ಫಲಾನುಭವಿಗಳಿಗೆ ಮನೆಗಳು ಸಿಗುತ್ತಿಲ್ಲ. ಪ್ರತಿ ಚುನಾವಣೆಯಲ್ಲಿ ಹಕ್ಕುಪತ್ರ ಕೊಡುತ್ತೇವೆ ಎಂದು ಫಲಾನುಭವಿಗಳಿಂದ ಹಕ್ಕುಪತ್ರ ಪಡೆಯುವುದು ಮತ್ತು ಹೊಸ ಹಕ್ಕುಪತ್ರ ಕೊಡುತ್ತೇವೆ ಎಂದು ಒಂದು ಕಾರ್ಯಕ್ರಮ ಮಾಡುವುದು. ಇದೇ ರೀತಿ ಮಾಡ್ತಾ ಮಾಡ್ತಾ ಹನ್ನೆರಡು ವರ್ಷ ಮುಗಿದುಹೋಯಿತು. ಈಗಾಗಲೇ ಸಾಕಷ್ಟು ಹಣ ಖರ್ಚು ಮಾಡಿಸಿದ್ದಾರೆ. ಮೂರು ನಾಲ್ಕು ತಿಂಗಳ ಹಿಂದೆಯೂ ಜಂಗಲ್ ಕಟ್ ಎಂದು ಲಕ್ಷಾಂತರ ರೂ. ಖರ್ಚು ಮಾಡಿದ್ದಾರೆ.
ಅದರ ಹಿಂದೆ ರೋಡ್ ಮಾಡುತ್ತೇವೆ ಎಂದಿದ್ದರು. ಆದ್ರೆ ಹಾಗೆಯೇ ಮುಂದುವರೆಸುತ್ತಿದ್ದಾರೆ. ಈಗ ನಿರ್ಮಿತಿ ಕೇಂದ್ರದಲ್ಲಿರುವ ಹಣದ ಬಗ್ಗೆಯೂ ತನಿಖೆಯಾಗಬೇಕು. ಆ ಮನೆಗಳನ್ನು ದೂಡಿದರೆ ಬೀಳುತ್ತವೆ. ಅಲ್ಲಿ ಪ್ರಾಣ ಕಳೆದುಕೊಳ್ಳಬೇಕಾದ್ರೆ ಮಾತ್ರ ಫಲಾನುಭವಿಗಳು ವಾಸಮಾಡಬೇಕು. ಅದು ವಾಸಮಾಡಲು ಯೋಗ್ಯವೇ ಇಲ್ಲ. ಇದ್ದಿದ್ದ ಹಣವನ್ನು ಖರ್ಚು ಮಾಡಿ ನಿರ್ಮಿತಿ ಕೇಂದ್ರದವರು ಕೈ ತೊಳೆದುಕೊಂಡಿದ್ದಾರೆ. ಹಣ ಬಿಡುಗಡೆಯಾಗಿಲ್ಲ, ನಾವು ಸ್ಥಗಿತ ಮಾಡುತ್ತೇವೆ ಎಂದು ಹೇಳಿದ್ದಾರೆ. ನಗರಸಭೆಯವರು ತಾಂತ್ರಿಕ ಪರಿಶೀಲನೆ, ತಾಂತ್ರಿಕ ವರದಿ ತನಿಖೆ ಮಾಡಿ ಹಣ ಬಿಡುಗಡೆಗೊಳಿಸಬೇಕಿತ್ತು. 12 ವರ್ಷವಾಗಿದೆ ಇನ್ನೂ ಮನೆಗಳಿಲ್ಲ. ನಾವು ಇನ್ನೆಷ್ಟು ವರ್ಷ ಕಾಯಬೇಕು'' ಎಂದು ಅಳಲನ್ನು ತೋಡಿಕೊಂಡಿದ್ದಾರೆ.
ಈ ಬಗ್ಗೆ ಶಾಸಕ ರಾಘವೇಂದ್ರ ಹಿಟ್ನಾಳ್ ಅವರು ಮಾತನಾಡಿ, ಈಗಾಗಲೇ ಸಚಿವ ಜಮೀರ್ ಅಹಮ್ಮದ್ ಅವರೊಂದಿಗೆ ಸಭೆ ಮಾಡಿದ್ದೇನೆ. ನಿರ್ಮಿತಿ ಕೇಂದ್ರವರು ಹಾಗೂ ನಗರಸಭೆಯವರು ಸೇರಿ 100 ಕೋಟಿ ರೂಪಾಯಿ ಅನುದಾನ ಕೇಳಿದ್ದೇವೆ. ಕುಡಿಯುವ ನೀರು, ಚರಂಡಿ, ವಿದ್ಯುತ್ ಸಂಪರ್ಕ ಇವೆಲ್ಲಾ ಮಾಡುವುದಕೋಸ್ಕರ ಸುಮಾರು 93 ಎಕರೆ ಜಮೀನಿಗೆ ಅನುದಾನ ಕೇಳಿದ್ದೇವೆ ಎಂದು ಸಹಮತವನ್ನು ವ್ಯಕ್ತಪಡಿಸಿದ್ದಾರೆ. ಆ ಕಾಮಗಾರಿಯನ್ನು ನಾವು ತೀವ್ರಗತಿಯಲ್ಲಿ ಕೈಗೆತ್ತಿಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಬಳ್ಳಾರಿ: ನೆರೆ ಸಂತ್ರಸ್ತರಿಗೆ ಸೂರು ಕಲ್ಪಿಸುವ ಯೋಜನೆಯ ಪ್ರಗತಿ ಪರಿಶೀಲನೆ