ಗಂಗಾವತಿ: ತಾಲೂಕಿನ ಜಂಗಮರ ಕಲ್ಗುಡಿ ಮತ್ತು ಹೊಸಕೇರಾ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಕಳೆದ 8 ತಿಂಗಳಿಂದ ರಸ್ತೆ ಮೇಲೆ ಬಾಗಿದ್ದ 11ಕೆವಿ ವಿದ್ಯುತ್ ಲೈನ್ ಕಂಬವನ್ನು ಜೆಸ್ಕಾಂ ಇಲಾಖೆಯ ಸಿಬ್ಬಂದಿ ಸರಿಪಡಿಸಿದ್ದಾರೆ.
ಕಳೆದ 6-8 ತಿಂಗಳಿನಿಂದ ವಿದ್ಯುತ್ ಕಂಬ ರಸ್ತೆಗೆ ವಾಲಿತ್ತು, ಯಾವುದೇ ಕ್ಷಣದಲ್ಲಿ ರಸ್ತೆಯಲ್ಲಿ ಸಂಚರಿಸುವವರ ಮೇಲೆ ಕಂಬ ಬೀಳುವ ಸಂಭವ ಇತ್ತು. ಈ ಬಗ್ಗೆ ಸಾಕಷ್ಟು ಜನರು ಸಂಬಂಧಿತ ಜೆಸ್ಕಾಂ ಸಿಬ್ಬಂದಿ ಗಮನಕ್ಕೆ ತಂದರೂ ಪ್ರಯೋಜನವಾಗಿರಲಿಲ್ಲ. ಆದರೆ ಈ ಕುರಿತು 'ಈಟಿವಿ ಭಾರತ'ದಲ್ಲಿ ''ರಸ್ತೆಗೆ ವಾಲಿದ ವಿದ್ಯುತ್ ಲೈನ್... ಭಯದಲ್ಲೇ ಸಂಚಾರ ಎಂಬ'' ಶೀರ್ಷಿಕೆಯಡಿ ಆ. 28ರಂದು ಸುದ್ದಿ ಬಿತ್ತರಿಸಲಾಗಿತ್ತು.
ಗಂಗಾವತಿ: ರಸ್ತೆಗೆ ವಾಲಿರುವ ವಿದ್ಯುತ್ ಲೈನ್.. ಭಯದಲ್ಲೇ ಸಂಚಾರ
ಇದರಿಂದ ಎಚ್ಚೆತ್ತೊಂಡ ಜೆಸ್ಕಾಂ ಸಿಬ್ಬಂದಿ ತಕ್ಷಣ ಸಮಸ್ಯೆಗೆ ಸ್ಪಂದಿಸಿ ದುರಸ್ತಿ ಕಾರ್ಯ ಮಾಡಿದ್ದಾರೆ. 6-8 ತಿಂಗಳಿಂದ ಈ ಸಂಬಂಧ ದೂರು ನೀಡಿದ್ದರೂ ಕೂಡಾ ಗಮನ ಹರಿಸದ ಜೆಸ್ಕಾಂ ಸಿಬ್ಬಂದಿ, 'ಈಟಿವಿ ಭಾರತ'ದಲ್ಲಿ ವರದಿ ಪ್ರಸಾರ ಆಗುತ್ತಿದ್ದಂತೆ ದುರಸ್ತಿ ಕೈಗೊಂಡಿದ್ದಾರೆ ಎಂದು ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರ ಪರವಾಗಿ ಹೊಸಕೇರಿ ಗ್ರಾಮದ ಸೋಮನಾಥ್ ಸಂತಸ ವ್ಯಕ್ತಪಡಿಸಿದ್ದಾರೆ.