ಗಂಗಾವತಿ: ಅಷ್ಟಾಗಿ ಕನ್ನಡ ತಿಳಿಯದ ಜನಾಂಗ ಒಂದರ ಕೆಲ ಕುಟುಂಬಕ್ಕೆ ತಾಲೂಕು ಪಂಚಾಯಿತಿ ಇಒ ಡಾ.ಮೋಹನ್ ಅವರದ್ದೆ ಭಾಷೆಯಲ್ಲಿ ಜಾಗೃತಿ ಮೂಡಿಸಿದರು.
ನಗರದಿಂದ ಸುಮಾರು ಐದು ಕಿ.ಮೀ ದೂರ ಇರುವ ಹಾಗೂ ಸುತ್ತಲೂ ಬೆಟ್ಟದಿಂದ ಸುತ್ತುವರೆದಿರುವ ಅತ್ಯಂತ ಹಿಂದುಳಿದ ಸೂರ್ಯನಾಯಕನ ತಾಂಡಕ್ಕೆ ಭೇಟಿ ನೀಡಿದ ಅಧಿಕಾರಿಗಳ ತಂಡ, ಕೊರೊನಾದ ಬಗ್ಗೆ ಜಾಗೃತಿ ಮೂಡಿಸಲು ಯತ್ನಿಸಿದರು. ಆದರೆ ಅಲ್ಲಿನ ಸ್ಥಳೀಯರಿಗೆ ಕನ್ನಡ ಭಾಷೆ ಅಷ್ಟಾಗಿ ಅರ್ಥವಾಗದ ಹಿನ್ನೆಲೆ ಲಿಪಿಯೇ ಇಲ್ಲದ ಲಂಬಾಣಿ ಭಾಷೆಯಲ್ಲಿ ಮೋಹನ್ ಅಲ್ಲಿನ ಯುವಕರು ಮತ್ತು ಮಹಿಳೆಯರಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿ ಗಮನ ಸೆಳೆದರು.
ನಗರದಿಂದ ಕೇವಲ ಐದು ಕಿ.ಮೀ. ಅಂತರವಿದ್ದರೂ ಸೂರ್ಯನಾಯಕನ ತಾಂಡಕ್ಕೆ ಸಂಚಾರ ಸೇರಿದಂತೆ ಬಹುತೇಕ ಕನಿಷ್ಠ ನಾಗರಿಕ ಸೌಲಭ್ಯಗಳಿಲ್ಲ. ಹೀಗಾಗಿ ಅಲ್ಲಿನ ಜನ ಬಾಹ್ಯ ಪ್ರಪಂಚದಲ್ಲಿ ನಡೆಯುವ ಪ್ರಚಲಿತ ವಿದ್ಯಮಾನದ ಬಗ್ಗೆ ಅಷ್ಟಕಷ್ಟೆ ಮಾಹಿತಿ ಇರುತ್ತದೆ. ಈ ಹಿನ್ನೆಲೆ ಅಧಿಕಾರಿಗಳು ಅಲ್ಲಿಗೆ ಭೇಟಿ ನೀಡಿ ಜಾಗೃತಿ ಮೂಡಿಸಿದರು.