ಕುಷ್ಟಗಿ(ಕೊಪ್ಪಳ): ವಿದ್ಯಾಗಮದಲ್ಲಿ ಮಕ್ಕಳ ಕಾರ್ಯಚಟುವಟಿಕೆಗಳಿಂದ ಸಾಮಾಜಿಕ ಅನಿಷ್ಟಗಳಾದ ಬಾಲ್ಯ ವಿವಾಹ, ಬಾಲಕ ಕಾರ್ಮಿಕ ಪದ್ದತಿ ದೂರವಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ದೊಡ್ಡಬಸಪ್ಪ ನೀರಲಕೇರಿ ಹೇಳಿದರು.
ನೀರಲಕೇರಿ ಅವರು ಗುರುವಾರ ಕುಷ್ಟಗಿ ಪಟ್ಟಣದ ಕೃಷ್ಣಗಿರಿ ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪಕ್ಕದ ಬನ್ನಿಕಟ್ಟೆ ದೇವಸ್ಥಾನದ ಆವರಣದಲ್ಲಿ ನಡೆದಿದ್ದ ವಿದ್ಯಾಗಮ ಕಾರ್ಯಚಟುವಟಿಕೆ ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ವಿದ್ಯಾಗಮ ಜಿಲ್ಲೆಯಾದ್ಯಂತ ಸರಿಯಾಗಿ ನಡೆಯುತ್ತಿದೆ. ಇದರಿಂದ ಮಕ್ಕಳ ಕಲಿಕೆಯ ನಿರಂತರತೆಯನ್ನು ಕಾಯ್ದುಕೊಳ್ಳಲು ಸಾದ್ಯವಿದೆ. ಅದೇರೀತಿ ಸಾಮಾಜಿಕ ಅನಿಷ್ಠಗಳಾದ ಬಾಲ್ಯವಿವಾಹ, ಬಾಲ ಕಾರ್ಮಿಕ ಪದ್ದತಿ ನಿರ್ಮೂಲನೆ ಮಾಡಬಹುದಾಗಿದೆ. ಶಾಲೆ ಇಲ್ಲ ಎನ್ನುವ ಕಾರಣದಿಂದ ಶಿಕ್ಷಣದಿಂದ ದೂರ ಉಳಿಯಬಾರದು ಎನ್ನುವ ಉದ್ದೇಶದಿಂದ ಹಾಗೂ ಶಿಕ್ಷಕರು ಮತ್ತು ಮಕ್ಕಳ ಸಂಪರ್ಕ ನಿರಂತರವಾಗಿರಲಿ ಎಂದೇ ವಿದ್ಯಾಗಮ ಯೋಜನೆ ರೂಪಿಸಲಾಗಿದೆ ಎಂದರು.
ವಿದ್ಯಾಗಮ ಯೋಜನೆಯಲ್ಲಿ ಶಿಕ್ಷಣದ ಜೊತೆಗೆ ಆರೋಗ್ಯದ ಕಡೆಗೂ ಗಮನ ಹರಿಸಲಾಗುತ್ತಿದೆ ಎಂದ ಅವರು, ಇದೇ ವೇಳೆ ವಿದ್ಯಾರ್ಥಿಗಳಿಂದ ವಿದ್ಯಾಗಮ ಯೋಜನೆ ಪ್ರಗತಿ, ಶಿಕ್ಷಕರಿಂದ ಪಾಠ ಕಲಿಕೆಯ ಬಗ್ಗೆ ಮಕ್ಕಳಿಂದ ತಿಳಿದುಕೊಂಡರು.