ಕೊಪ್ಪಳ: ತಾಲೂಕಿನ ಅಳವಂಡಿ ಬಳಿಯ ಕಂಪ್ಲಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಗ್ರಾಮಸ್ಥರು ಹನಿ ನೀರಿಗಾಗಿ ಪರದಾಡುತ್ತಿದ್ದಾರೆ.
ಬೇಸಿಗೆ ಸಂದರ್ಭದಲ್ಲಿ ನೀರಿನ ಬವಣೆ ಸಾಮಾನ್ಯ. ಅಂತೆಯೇ ಕುಡಿಯುವ ನೀರಿಗಾಗಿ ಈ ಗ್ರಾಮಸ್ಥರು ಪರದಾಡುವಂತಾಗಿದೆ. ಬೆಟಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೋರನಾಳ ಗ್ರಾಮಕ್ಕೆ ಸರಬರಾಜಗುವ ನೀರಿನ ಪೈಪ್ ಮೂಲಕ ಕಂಪ್ಲಿ ಗ್ರಾಮಕ್ಕೆ ನೀರು ಸಿಗುತ್ತಿತ್ತು. ಕಂಪ್ಲಿ ಗ್ರಾಮಕ್ಕೆ ನೀರು ಪೂರೈಸಲು ಬೇರೆ ಪೈಪ್ಲೈನ್ ಮಾಡದೆ ಇರುವುದು ಗ್ರಾಮದ ಜನರು ನೀರಿಗಾಗಿ ಪರದಾಡುವುದಕ್ಕೆ ಮುಖ್ಯ ಕಾರಣವಾಗಿದೆ.
ಮೋರನಾಳ ಗ್ರಾಮಕ್ಕೆ ಕುಡಿಯುವ ನೀರು ಸಾಲದ ಹಿನ್ನೆಲೆ ಅದೇ ಪೈಪ್ ಮೂಲಕ ಕಂಪ್ಲಿ ಗ್ರಾಮಕ್ಕೆ ಪೂರೈಕೆಯಾಗುತ್ತಿದ್ದ ನೀರನ್ನು ಬಂದ್ ಮಾಡಲಾಗಿದೆ. ಇದರಿಂದಾಗಿ ಗ್ರಾಮಸ್ಥರು ಕುಡಿಯುವ ನೀರನ್ನು ಹೊಲಗಳಿಗೆ ಹೋಗಿ ತರಬೇಕಾದ ಸನ್ನಿವೇಶ ನಿರ್ಮಾಣವಾಗಿದೆ. ತಮ್ಮ ಗ್ರಾಮಕ್ಕೆ ಬೇರೆ ಪೈಪ್ಲೈನ್ ಹಾಕಿ ಕುಡಿಯುವ ನೀರನ್ನು ಪೂರೈಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.