ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ ಮಳೆಯಾಗುವುದು ಕಡಿಮೆ, ಅದರಲ್ಲೂ ನವೆಂಬರ್ ಮಾಸದಲ್ಲಿ ಮಳೆಯಾಗುವುದು ಬಹಳ ಕಡಿಮೆ. ಹೀಗಾಗಿ ರೈತರು ಬೆಳೆಗಳನ್ನು ಕಟಾವು ಮಾಡಿ ರಾಶಿ ಮಾಡಿದ್ರು. ಆದರೆ ಕಳೆದ ಮೂರು ದಿನಗಳ ಹಿಂದೆ ಸುರಿದ ಮಳೆಗೆ ಕಟಾವು ಮಾಡಿದ ಬೆಳೆಗಳು ಸಂಪೂರ್ಣವಾಗಿ ಹಾಳಾಗಿವೆ. ಕೊಯ್ಲು ಮಾಡಿದ ಫಸಲಿನಲ್ಲಿ ಮೊಳಕೆಯೊಡೆದಿದೆ. ಮಳೆಯಿಂದ ನಷ್ಟ ಅನುಭವಿಸಿದ ರೈತರಿಗೆ ಸರ್ಕಾರ ಪರಿಹಾರ ನೀಡುವುದಾಗಿ ಘೋಷಿಸಿದೆ. ಆದರೆ ಸರ್ಕಾರದ ಕೆಲ ನಿಯಮಾವಳಿಯಿಂದ ಈ ಪರಿಹಾರ ರೈತರಿಗೆ ತಲುಪುತ್ತಾ ಅನ್ನುವ ಅನುಮಾನ ಶುರುವಾಗಿದೆ.
ಬೆಳೆ ಕಟಾವು ಮಾಡಿ ರಾಶಿ ಹಾಕಿದ ರೈತರಿಗೆ ಪರಿಹಾರ ಸಿಗುತ್ತಾ?
ಕಳೆದ ಕೆಲ ದಿನಗಳಿಂದ ಸುರಿದ ಮಳೆಗೆ ಇಡೀ ರಾಜ್ಯವೇ ತತ್ತರಿಸಿ ಹೋಗಿದೆ. ಮಳೆಯಿಂದ ಹಾನಿಯಾದ ಪ್ರದೇಶದ ಸಮೀಕ್ಷೆ ನಡೆಸಿ ತ್ವರಿತ ಪರಿಹಾರ ನೀಡುವ ಭರವಸೆಯನ್ನು ಈಗಾಗಲೇ ಸರ್ಕಾರ ನೀಡಿದೆ. ಆದರೆ ಈ ಪರಿಹಾರವು ಬೆಳೆ ಕಟಾವು ಮಾಡಿದ ರೈತರಿಗೆ ದೊರೆಯುವುದಿಲ್ಲ. ಕಟಾವು ಮಾಡಿ ರಾಶಿ ಹಾಕಿದ ರೈತರಿಗೆ ಪರಿಹಾರ ನೀಡಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಲ್ಲಿ ಅವಕಾಶವಿಲ್ಲ. ಕೇವಲ ಹೊಲದಲ್ಲಿಯೇ ಇರುವ ಬೆಳೆಗೆ ಮಾತ್ರ ಪರಿಹಾರ ನೀಡಲು ಅವಕಾಶವಿದೆ. ಆದರೆ ಕೊಪ್ಪಳ ಜಿಲ್ಲೆಯಲ್ಲಿ ಬಹುತೇಕ ರೈತರು ಈಗಾಗಲೇ ಬೆಳೆಯನ್ನು ಕಟಾವು ಮಾಡಿ ಒಂದೆಡೆ ರಾಶಿ ಹಾಕಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ.
ಕೊಪ್ಪಳ ಜಿಲ್ಲೆಯಲ್ಲಿ ವಾಡಿಕೆಯಂತೆ ಒಟ್ಟು 601 ಮಿಲಿ ಮೀಟರ್ ಮಳೆಯಾಗಬೇಕಿತ್ತು. ಆದರೆ ಆಗಿದ್ದು 599 ಮಿಲಿ ಮೀಟರ್ ಮಳೆಯಾಗಿದೆ. ಈ ನಡುವೆ ನವಂಬರ್ 14ರಿಂದ ನವಂಬರ್ 20ರವರೆಗಿನ ಅವಧಿಯಲ್ಲಿ ವಾಡಿಕೆಯಂತೆ 10 ಮಿ.ಮೀ ಮಳೆಯಾಗುತ್ತಿತ್ತು. ಆದರೆ ಈ ಬಾರಿ ಆಗಿದ್ದು 37 ಮಿ.ಮೀ. ನವೆಂಬರ್ ತಿಂಗಳಲ್ಲಿ ವಾಡಿಕೆಯಂತೆ 26 ಮಿ.ಮೀ ಮಳೆಯಾಗಬೇಕಿತ್ತು. ಈ ಬಾರಿ ಅದು 41 ಮಿ.ಮೀ ಸುರಿದಿದೆ. ಅಂದರೆ ಶೇಕಡ 57 ರಷ್ಟಾಗಿದೆ.
ಸಂಪೂರ್ಣ ಬೆಳೆ ನಾಶ:
ಜೂನ್ ಹಾಗೂ ಜುಲೈ ತಿಂಗಳಲ್ಲಿ ನಾಟಿ ಮಾಡಿದ ಬೆಳೆಯನ್ನು ನವೆಂಬರ್ ತಿಂಗಳಲ್ಲಿ ಕಟಾವು ಮಾಡಲಾಗುತ್ತದೆ. ನವೆಂಬರ್ ತಿಂಗಳಲ್ಲಿ ಮಳೆಯಾದರೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಈ ಬಾರಿ ಚಳಿಗಾಲದಲ್ಲಿ ವಾಯುಭಾರ ಕುಸಿತದಿಂದಾಗಿ ಮಳೆಯಾಗಿ ಕಟಾವು ಮಾಡಿದ ಬೆಳೆಯು ಸಂಪೂರ್ಣವಾಗಿ ಹಾಳಾಗಿದೆ.
ಜಿಲ್ಲೆಯಲ್ಲಿ ಈಗಿನ ಅಂದಾಜಿನ ಪ್ರಕಾರ 7,819 ಹೆಕ್ಟೇರ್ ಪ್ರದೇಶದಲ್ಲಿ ಭತ್ತ, 10,814 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ, 218 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ, ದ್ರಾಕ್ಷಿ, ಪಪ್ಪಾಯಿ, ಈರುಳ್ಳಿ ಸೇರಿ 2,500 ಹೆಕ್ಟೇರ್ ಪ್ರದೇಶದಲ್ಲಿನ ತೋಟಗಾರಿಕೆ ಬೆಳೆಯು ವರುಣನ ಅವಾಂತರದಿಂದ ಹಾಳಾಗಿದ್ದು ಇನ್ನೂ ಸಮೀಕ್ಷೆ ನಡೆಯುತ್ತಿದೆ ಎಂದು ಜಿಲ್ಲಾಡಳಿತ ಹೇಳುತ್ತಿದೆ.
ಇದನ್ನೂ ಓದಿ: ಮಣ್ಣಿನಿಂದ ರಸ್ತೆ ಗುಂಡಿ ಮುಚ್ಚಿದ ಪೊಲೀಸ್ ಸಿಬ್ಬಂದಿ ನಡೆಗೆ ಜನ ಮೆಚ್ಚುಗೆ
ಮಳೆ ಹಾನಿ ಸಮೀಕ್ಷೆಯಲ್ಲಿ ಹೊಲದಲ್ಲಿದ್ದ ಬೆಳೆ ನಾಶವಾಗಿದ್ದರೆ ಮಾತ್ರ ಹಾನಿ ಎಂದು ಪರಿಗಣಿಸಲಾಗಿದೆ. ಆದರೆ ಈಗ ಹೊಲಗಳಿಗಿಂತ ಅಧಿಕ ಪ್ರಮಾಣದಲ್ಲಿ ರಾಶಿ ಮಾಡಿ ಹಾಕಿದ ಬೆಳೆ ನಾಶವಾಗಿದೆ. ಭತ್ತ ಮತ್ತು ಮೆಕ್ಕೆಜೋಳ ಗುಡ್ಡೆ ಹಾಕಿದಲ್ಲಿಯೇ ಮೊಳಕೆಯೊಡೆದಿದೆ. ಮೊಳಕೆಯೊಡೆದ ಧಾನ್ಯವನ್ನು ಮಾರುಕಟ್ಟೆಯಲ್ಲಿ ಖರೀದಿಸುವುದಿಲ್ಲ. ಹೀಗಾಗಿ ರೈತನ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಸರ್ಕಾರ ಪ್ರಾಕೃತಿಕ ವಿಕೋಪಕ್ಕೆ ಸ್ಪಂದಿಸಿ ಪರಿಹಾರ ನೀಡಬೇಕೆಂಬುದು ಜಿಲ್ಲೆಯ ರೈತರ ಮನವಿಯಾಗಿದೆ.