ಕೊಪ್ಪಳ: ನಮ್ಮನ್ನು ದಯವಿಟ್ಟು ಅನರ್ಹ ಮಾಡಬೇಡಿ ಎಂದು ಅತೃಪ್ತ ಶಾಸಕರು ಮಾಜಿ ಸಿಎಂ ಸಿದ್ದರಾಮಯ್ಯಗೆ ದೂರವಾಣಿ ಮೂಲಕ ಕರೆ ಮಾಡಿದ್ದರು. ಆ ಸಮಯದಲ್ಲಿ ನಾನು ಸಿದ್ದರಾಮಯ್ಯ ಅವರ ಜೊತೆಯಲ್ಲೇ ಇದ್ದೆ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಹೊಸ ಬಾಂಬ್ ಸಿಡಿಸಿದ್ದಾರೆ.
ಗಂಗಾವತಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅತೃಪ್ತರು ಸಿದ್ದರಾಮಯ್ಯಗೆ ಕರೆ ಮಾಡಿ ನಮ್ಮನ್ನು ಅನರ್ಹ ಮಾಡದಂತೆ ಮನವಿ ಮಾಡಿಕೊಂಡರು. ನಾವು ನಿಮ್ಮ ಜೊತೆ ಬರುತ್ತೇವೆ ಎಂದಿದ್ದರು. ಆದರೆ, ಬಿಜೆಪಿ ವಾಮಮಾರ್ಗದ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಪಕ್ಕದ ಮನೆಯ ಮಗುವನ್ನು ನಮ್ಮದು ಎಂದು ಬಿಜೆಪಿಯವರು ನಾಮಕರಣ ಮಾಡ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿಯವರಿಗೆ ಮಾನ, ಮರ್ಯಾದೆ, ನಾಚಿಕೆ ಯಾವೂದು ಇಲ್ಲ. ತಮ್ಮ ಮಾನ ಮುಚ್ಚಿಸಿಕೊಳ್ಳುವುದಕ್ಕೆ ಅತೃಪ್ತರಿಂದ ಸಿದ್ದರಾಮಯ್ಯ ಅವರ ಹೆಸರನ್ನು ಬಿಜೆಪಿ ಪ್ರಸ್ತಾಪ ಮಾಡಿಸುತ್ತಿದೆ. ಸಿದ್ದರಾಮಯ್ಯ ಅವರು ಯಾರನ್ನು ಕಳುಹಿಸಿಲ್ಲ. ಅತೃಪ್ತರ ಚಟುವಟಿಕೆಯಿಂದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ತುಂಬಾ ನೊಂದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.