ಕುಷ್ಟಗಿ(ಕೊಪ್ಪಳ): ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಅವರು ಸಾಲದ ವಿಷಯ ಪ್ರಸ್ತಾಪಕ್ಕೆ ಭಾವೋದ್ವೇಗಕ್ಕೆ ಒಳಗಾಗಿದ್ದಾರೆ. ಕೋಟ್ಯಂತರ ರೂ. ಸಾಲ ಮಾಡಿರುವುದು, ಅವರಲ್ಲಿ ಏನೂ ಇಲ್ಲ ಎಂದು ಜನರಿಗೆ ತೋರ್ಪಡಿಸುವ ನಾಟಕ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಕುಟುಕಿದರು.
ನಗರದ ಸರ್ಕ್ಯೂಟ್ ಹೌಸ್ನಲ್ಲಿ ಮಾತನಾಡಿದ ಅವರು, ಬಹಿರಂಗ ಭಾಷಣದಲ್ಲಿ ಶಾಸಕ ಬಯ್ಯಾಪೂರ ಬಿಜೆಪಿಯವರು ಸಾಯಲಿ 1 ಕೋಟಿ ರೂ. ಕಾಂಗ್ರೆಸ್ ಪಕ್ಷದಿಂದ ಕೊಡುವುದಾಗಿ ದೊಡ್ಡದಾಗಿ ಭಾಷಣ ಮಾಡಿದ್ದರು. ಅದಕ್ಕೆ ಪ್ರತಿ ನಾನು ಕೊಟ್ಟಿರುವ ವ್ಯಕ್ತಿಯ ಸಾಲ ತೀರಿಸಲಿ ಎಂದು ಹೇಳಿದ್ದೆ.
ಶಾಸಕ ಬಯ್ಯಾಪೂರ ಅವರ ಸಾಲ ಅದು ಅವರ ವೈಯಕ್ತಿಕ ವಿಷಯ ಅಂತಾ ಹೇಳಿದ್ದೇನೆ. ಆದ್ರೂ ಅವರು, ಸಾಲ ತೀರಿಸಲು ನಾನು ಮಧ್ಯಸ್ಥಿಕೆವಹಿಸಿಕೊಳ್ಳಲಿ ಎಂದು ಸವಾಲು ಹಾಕಿರುವುದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಅವರು ಭ್ರಮನಿರಸನರಾಗಿದ್ದಾರೆ ಎಂಬುದನ್ನು ತೋರಿಸುತ್ತದೆ ಎಂದರು.
ಸಾಲದ ಅಡಿಯೋ : ಶಾಸಕ ಬಯ್ಯಾಪೂರ ಹಾಗೂ ಅವರ ಸಂಬಂಧಿ ಲಿಂಗಸುಗೂರಿನ ಶರಣಗೌಡ ಮಧ್ಯೆ ಇರುವ ಸಾಲದ ವ್ಯವಹಾರ ವೈಯಕ್ತಿಕ ವಿಷಯ. ಇದರಲ್ಲಿ ನಾನು ಮದ್ಯಸ್ಥಿಕೆವಹಿಸಲ್ಲ. ಅದರ ಅಗತ್ಯವೂ ನನಗಿಲ್ಲ. ಲಿಂಗಸುಗೂರಿನ ಶರಣಗೌಡ ಪಾಟೀಲ ತಮ್ಮೊಂದಿಗೆ ಮಾತನಾಡಿದ ಸಾಲದ ವ್ಯವಹಾರದ ಸಂಭಾಷಣೆಯ ಮೊಬೈಲ್ ರಿಕಾರ್ಡಿಂಗ್ ಇದೆ, ಕೇಳಿ ಎಂದು ಸುದ್ದಿಗಾರರಿಗೆ ಅಡಿಯೋ ಕೇಳಿಸಿದರು.