ಗಂಗಾವತಿ (ಕೊಪ್ಪಳ) : ಆರೋಗ್ಯ ಇಲಾಖೆಯು ಶಿಕ್ಷಣ ಇಲಾಖೆ ಬಳಿಕ ರಾಜ್ಯದಲ್ಲೇ ಅತಿದೊಡ್ಡ ಇಲಾಖೆಯಾಗಿದೆ. ಇದನ್ನು ನಿಭಾಯಿಸುವುದು ಸುಲಭದ ಮಾತಲ್ಲ. ಆದರೆ ಸರ್ಕಾರದೊಂದಿಗೆ ಜನರ ಆರೋಗ್ಯ ರಕ್ಷಣೆಯಲ್ಲಿ ಖಾಸಗಿ ವೈದ್ಯರೂ ಕೈ ಜೋಡಿಸಿರುವುದು ಆರೋಗ್ಯ ವಲಯ ಸುಧಾರಣೆಗೆ ಪ್ರಮುಖ ಕಾರಣವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕಿ ಡಾ. ಇಂದುಮತಿ ಎಂ. ಹೇಳಿದರು.
ಇಂದು ನಗರದ ಭಾರತೀಯ ವೈದ್ಯರ ಭವನದಲ್ಲಿ ಐಎಂಎ ಸಂಘಟನೆಯ ಮಹಿಳಾ ಘಟಕದಿಂದ ಹಮ್ಮಿಕೊಂಡಿದ್ದ ವೈದ್ಯೆಯರ ರಾಜ್ಯಮಟ್ಟದ 5ನೇ ಸಮ್ಮೇಳನ`ಅಂಜನಾ-2023' ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬಳಿಕ ಅವರು ಮಾತನಾಡಿದರು. ರಾಜ್ಯದಲ್ಲಿ 16 ಜಿಲ್ಲಾ ಆಸ್ಪತ್ರೆ, 6 ಜನರಲ್ ಆಸ್ಪತ್ರೆ, 300ಕ್ಕೂ ಹೆಚ್ಚು ನಮ್ಮ ಕ್ಲಿನಿಕ್, 175ಕ್ಕೂ ಹೆಚ್ಚು ತಾಲ್ಲೂಕು ಆಸ್ಪತ್ರೆಗಳು ಸರ್ಕಾರಿ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿವೆ. 270ಕ್ಕೂ ಹೆಚ್ಚು ಮುಖ್ಯ ವೈದ್ಯಾಧಿಕಾರಿಗಳು, 9 ಸಾವಿರ ಎಎನ್ಎಂ, ನಾಲ್ಕೂವರೆ ಸಾವಿರ ಪುರುಷ ಸಿಬ್ಬಂದಿ, 45 ಸಾವಿರ ಆಶಾ ಕಾರ್ಯಕರ್ತೆಯರು ಸೇರಿದಂತೆ ಲಕ್ಷಕ್ಕೂ ಹೆಚ್ಚು ಜನ ಇಲಾಖೆಯ ಅಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಒಂದು ವರ್ಷಕ್ಕೆ ಎಂಟು ಕೋಟಿ ಹೊರ ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸುಮಾರು 61 ಲಕ್ಷ ಒಳರೋಗಿಗಳಿಗೆ ಹಾಗೂ ವಾರ್ಷಿಕವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ 5.3 ಲಕ್ಷದಷ್ಟು ಹೆರಿಗೆ ಮಾಡಿಸಲಾಗುತ್ತಿದೆ ಎಂದು ಹೇಳಿದರು.
ರಾಜ್ಯದ ನಾನಾ ಮೆಡಿಕಲ್ ಕಾಲೇಜುಗಳಲ್ಲಿ 662ಕ್ಕೂ ಹೆಚ್ಚು ಎಂಬಿಬಿಎಸ್ ಸ್ನಾತಕೋತ್ತರ ಪದವೀಧರ ವೈದ್ಯರಿಗೆ ತರಬೇತಿ ನೀಡಲಾಗುತ್ತಿದೆ. ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿನ ವೈದ್ಯಕೀಯ ಶಿಕ್ಷಣ ಇತರೇ ರಾಜ್ಯಗಳಿಗಿಂತ ಹತ್ತು ವರ್ಷ ಮುಂದಿದೆ. ಪ್ರತ್ಯೇಕ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಮೂಲಕ ಹೆರಿಗೆಯ ಸಂದರ್ಭದಲ್ಲಿ ದಾಖಲಾಗುವ ಮಹಿಳೆಯರ ಮತ್ತು ಮಕ್ಕಳ ಆರೋಗ್ಯದ ಬಗ್ಗೆ ವಿಶೇಷವಾಗಿ ನಿಗಾವಹಿಸಲಾಗುತ್ತಿದೆ ಎಂದರು.
ಅಲ್ಲದೆ ಇತ್ತೀಚಿನ ದಿನಗಳಲ್ಲಿ ಗಂಗಾವತಿಯ ಉಪ ವಿಭಾಗ ಸರ್ಕಾರಿ ಆಸ್ಪತ್ರೆ ಮಾದರಿ ಆಸ್ಪತ್ರೆಯಾಗಿದೆ ಎಂದು ಶ್ಲಾಘಿಸಿದರು. ಆರೋಗ್ಯ ಕ್ಷೇತ್ರದ ಸುಧಾರಣೆ ಕೇವಲ ಸರ್ಕಾರದಿಂದ ಮಾತ್ರ ಸಾಧ್ಯವಾಗುವ ಕೆಲಸವಲ್ಲ. ಸಾರ್ವಜನಿಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಐಎಂಎ ಸಂಸ್ಥೆ ಸೇರಿದಂತೆ ನಾನಾ ಖಾಸಗಿ ಸಂಸ್ಥೆಗಳ ವೈದ್ಯರ ಪಾತ್ರವೂ ಅತ್ಯಂತ ಮುಖ್ಯವಾಗಿದೆ ಎಂದು ಡಾ. ಇಂದುಮತಿ ಹೇಳಿದರು.
ಇದನ್ನೂ ಓದಿ : ಕಳಸ ತಾಲೂಕು ಆಸ್ಪತ್ರೆಯಲ್ಲಿ ಶವ ಪರೀಕ್ಷೆಗೆ ವೈದ್ಯರಿಲ್ಲದೆ ಪರದಾಟ