ಕೊಪ್ಪಳ: ಜಿಲ್ಲೆಯಲ್ಲಿಯೂ ಮೊದಲ ಹಂತಕ ಕೊರೊನಾ ಲಸಿಕೆ ನೀಡಲು ಆರೋಗ್ಯ ಇಲಾಖೆ ಪ್ರಾರಂಭಿಸಿದ್ದು, ಮೊದಲನೆಯವರಾಗಿ ಜಿಲ್ಲಾಸ್ಪತ್ರೆ ಸಿಬ್ಬಂದಿ ಬಸವರಾಜ್ ಬಿ.ಎಲ್. ಕೊವಿಶೀಲ್ಡ್ ಲಸಿಕೆ ಪಡೆದುಕೊಂಡಿದ್ದಾರೆ.
ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಎಎನ್ಎಂ ಕೇಂದ್ರದಲ್ಲಿ ಕೊರೊನಾ ಲಸಿಕೆ ನೀಡಿಕೆಗೆ ವ್ಯವಸ್ಥೆ ಮಾಡಲಾಗಿದೆ. ಎರಡನೆಯವರಾಗಿ ಆಶಾಬಿ ಎಂಬುವರು ಲಸಿಕೆ ಪಡೆದುಕೊಂಡರು. ಈ ಸಂದರ್ಭದಲ್ಲಿ ಸಂಸದ ಸಂಗಣ್ಣ ಕರಡಿ, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಡಿಎಚ್ಓ ಡಾ. ಲಿಂಗರಾಜ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎಸ್.ಬಿ. ದಾನರೆಡ್ಡಿ ಸೇರಿದಂತೆ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು.
ಮೊದಲು ಲಸಿಕೆ ಪಡೆದ ಬಸವರಾಜ್ಗೆ ಸಂಸದ ಸಂಗಣ್ಣ ಕರಡಿ ಗುಲಾಬಿ ಹೂ ನೀಡುವ ಮೂಲಕ ಶುಭಕೋರಿದರು. ಲಸಿಕೆ ಪಡೆದ ಬಸವರಾಜ ಬಳಿಕ ನಿಗಾ ವಿಭಾಗಕ್ಕೆ ತೆರಳಿದರು. ಜಿಲ್ಲೆಯ ನಾಲ್ಕು ಕೇಂದ್ರಗಳಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತಿದ್ದು, ಪ್ರತಿ ದಿನ ಒಂದು ಕೇಂದ್ರದಲ್ಲಿ 100 ಜನ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ತಿಳಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಸಂಗಣ್ಣ ಕರಡಿ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹಾಗೂ ರಾಜ್ಯ ಆರೋಗ್ಯ ಇಲಾಖೆ ಹಾಗೂ ಲಸಿಕೆ ಸಂಶೋಧಿಸಿದ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದರು.