ಗಂಗಾವತಿ: ಸರ್ಕಾರಿ ಶಾಲೆಯಲ್ಲಿನ ಬಡ ಮಕ್ಕಳ ಕಲಿಕೆಗೆ ಅನುಕೂಲವಾಗಲಿ ಎಂಬ ಉದ್ದೇಶಕ್ಕೆ ಬೆಂಗಳೂರಿನ ಸಾಫ್ಟ್ವೇರ್ ಸಂಸ್ಥೆಯೊಂದು ತಾಲ್ಲೂಕಿನ ಕುಂಟೋಜಿ-ಡಗ್ಗಿ ಶಾಲೆಗೆ 4ಡಿ ಆ್ಯನಿಮೇಷನ್ ಇರುವ 50 ಸೆಟ್ಗಳನ್ನು ಉಚಿತವಾಗಿ ಪೂರೈಸಿದೆ.
ಮಕ್ಕಳ ಪರಿಸರಕ್ಕೆ ಪೂರಕವಾಗಿ ಕಲಿಕಾ ಸನ್ನಿವೇಶ ನಿಮಾರ್ಣಕ್ಕೆ ನೆರವು ನೀಡಬಲ್ಲ ತಂತ್ರಜ್ಞಾನ ಆಧಾರಿತ ಎಆರ್ ಫ್ಲಾಶ್ ಕಾರ್ಡ್ಗಳ 50 ಸೆಟ್ಗಳನ್ನು (ಅಂದಾಜು ಮೌಲ್ಯ 20 ಸಾವಿರ ಮೊತ್ತ) ಬೆಂಗಳೂರಿನ ಹುಲ್ಸೆನೆಟ್ ಕಂಪನಿಯ ಸಿಇಒ ರಾಕೇಶ್ ನೀಡಿದ್ದಾರೆ.
ಸರ್ಕಾರಿ ಶಾಲೆಗಳ ಸಬಲೀಕರಣ ಮಾಡುವ ಈ ಹೊತ್ತಿನಲ್ಲಿ ಇಂತಹ ಸಂಸ್ಥೆಗಳು ಇಡುತ್ತಿರುವ ಹೆಜ್ಜೆಗಳು ಸಮುದಾಯದಲ್ಲಿ ಧನಾತ್ಮಕ ಭಾವನೆ ಮೂಡಲು ಕಾರಣವಾಗುತ್ತವೆ ಎಂದು ಮಕ್ಕಳ ಪಾಲಕರು ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರಾಣಿಗಳ ಜೀವಂತಿಕೆಯಂತೆ ತೋರುವ, ಸಂಚಾರಿ ವಾಹನ, ಮೂಲಾಕ್ಷರಗಳ ಬಗೆಗಿನ ಕಾರ್ಡ್ ನೀಡಲಾಗಿದೆ. ಇದರಿಂದ ಮಕ್ಕಳು ಸೃಜನಶೀಲರಾಗಿ ಕಲಿಕೆಯಲ್ಲಿ ತೊಡಗಿಕೊಳ್ಳಬಹುದು ಎಂದು ಶಾಲೆಯ ಶಿಕ್ಷಕ ಸೋಮು ಕುದರಿಹಾಳ ಸಂತಸ ವ್ಯಕ್ತಪಡಿಸಿದ್ದಾರೆ.