ಗಂಗಾವತಿ : ಕೊರೊನಾ ಹಿನ್ನೆಲೆ ಶಾಲೆಗಳು ಮುಚ್ಚಿದ್ದರಿಂದ ಕಳೆದ ಮೂರು ತಿಂಗಳಿನಿಂದ ವೇತನವಿಲ್ಲದೆ ಪರದಾಡುತ್ತಿರುವ ಖಾಸಗಿ ಶಾಲೆಗಳ ಬೋಧಕ, ಬೋಧಕೇತರ ಸಿಬ್ಬಂದಿ, ಪರಿಚಾರಕ ಹಾಗೂ ವಾಹನ ಚಾಲಕರಿಗೆ ಶಿಕ್ಷಕರ ಸಂಘ ಹಾಗೂ ಹಳೆ ವಿದ್ಯಾರ್ಥಿಗಳು ನೆರವಿನ ಹಸ್ತ ಚಾಚಿದ್ದಾರೆ.
ಪಟ್ಟಣದ ಬೇತೆಲ್ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನುದಾನ ರಹಿತ ಶಾಲಾ ಕಾಲೇಜು ಶಿಕ್ಷಕರ ಸಂಘದ ಪದಾಧಿಕಾರಿಗಳು ಹಾಗೂ ಶಾಲೆಯ ಹಳೆಯ ವಿದ್ಯಾರ್ಥಿಗಳು ಸೇರಿ ತಾಲೂಕಿನ ಖಾಸಗಿ ಶಾಲೆಗಳ 700ಕ್ಕೂ ಹೆಚ್ಚು ಸಿಬ್ಬಂದಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸಿದರು.
ಈ ವೇಳೆ ಸಂಘದ ಅಧ್ಯಕ್ಷ ಮನೋಜಸ್ವಾಮಿ ಹಿರೇಮಠ ಮಾತನಾಡಿ, ನಾವೆಲ್ಲ ಮಕ್ಕಳಿದ್ದಾಗ ನಮ್ಮನ್ನು ತಾಯಿಯಂತೆ ಕಂಡು ಆರೈಕೆ ಮಾಡಿದ ಆಯಮ್ಮ ಸೇರಿದಂತೆ ನಮಗೆ ಶಿಕ್ಷಣ ಕೊಟ್ಟು ಮಾರ್ಗದರ್ಶನ ಮಾಡಿದ ಶಿಕ್ಷಕ ಸಮುದಾಯ ಸಂಕಷ್ಟದಲ್ಲಿರುವಾಗ ಅವರ ನೆರವಿಗೆ ಬರಬೇಕಾಗಿರುವುದು ನಮ್ಮ ಧರ್ಮ ಎಂದರು.
ತಲಾ 25 ಕೆಜಿ ಅಕ್ಕಿ, ಸಕ್ಕರೆ, ಬೇಳೆ, ಬೆಲ್ಲ, ಚಹಾಪುಡಿ, ಮಸಾಲೆ ಪದಾರ್ಥ ಸೇರಿದಂತೆ ಒಟ್ಟು ಎರಡು ಸಾವಿರ ರೂ. ಮೌಲ್ಯದ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.