ಕುಷ್ಟಗಿ(ಕೊಪ್ಪಳ): ಸರ್ಕಾರಿ ನೌಕರರು ಸೇವಾ ಭದ್ರತೆಗಾಗಿ ಪ್ರತಿ ತಿಂಗಳ ವೇತನವನ್ನು ನಿರೀಕ್ಷಿಸಿದಂತೆ ಯುವ ಕೃಷಿಕನೊಬ್ಬ ಜೀವನ ಭದ್ರತೆಗಾಗಿ ತೋಟಗಾರಿಕೆಯಿಂದ ಪ್ರತಿ ತಿಂಗಳ ಆದಾಯ ಪಡೆಯುತ್ತೇನೆ ಎಂದು ಚಾಲೆಂಜ್ ಸ್ವೀಕರಿಸಿದ್ದಾರೆ. ಕುಷ್ಟಗಿ ತಾಲೂಕಿನ ಹನುಮಸಾಗರ ಯುವ ರೈತ ರುದ್ರಗೌಡ ಗೌಡಪ್ಪನವರ್, ಡಿಪ್ಲೋಮಾ ಮೆಕ್ಯಾನಿಕ್ ಪದವೀಧರನಾಗಿದ್ದು, ತಮ್ಮ 6 ಎಕರೆ 8 ಗುಂಟೆ ತೋಟದಲ್ಲಿ 4,960 ಗಿಡಗಳನ್ನು ನಾಟಿ ಮಾಡಿದ್ದಾರೆ. ಕುಷ್ಟಗಿ- ಹನುಮಸಾಗರ ರಸ್ತೆಯ ಬಯಲು ಪ್ರದೇಶದಲ್ಲಿ ಹಸಿರಿನಿಂದ ಕಂಗೊಳಿಸುವ ಇವರ ತೋಟ ಕಾಣಬಹುದಾಗಿದೆ.
ಯುವ ಕೃಷಿಕ ರುದ್ರಗೌಡ ಗೌಡಪ್ಪನವರ್ ಓದಿರುವುದು ತಾಂತ್ರಿಕ ಕ್ಷೇತ್ರವಾದರೂ ಭವಿಷ್ಯದ ಜೀವನಕ್ಕೆ ಸಮಗ್ರ ಕೃಷಿ ತೋಟಗಾರಿಕೆ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. 2012ರಲ್ಲಿ ಜಮೀನು ಖರೀದಿಸಿ, ಜಮೀನಿನ ಸುತ್ತಲೂ ಫೆನ್ಸಿಂಗ್ (ರಕ್ಷಣಾ ಬೇಲಿ) ಹಾಕಿ, ಪ್ರತಿ ಗಿಡಕ್ಕೂ 3 ಅಡಿ ಆಳವಾದ ಗುಂಡಿಯಲ್ಲಿ ಕೆರೆಮಣ್ಣು, ಕಪ್ಪು ಮಣ್ಣು, ಕೋಳಿ ಗೊಬ್ಬರ, ಸಗಣಿ ಗೊಬ್ಬರ, ಬೇವಿನ ಹಿಂಡಿ, ಥಿಮೇಟ್ ಪೌಡರ್ ಮಿಶ್ರಣವನ್ನು ಭರ್ತಿ ಮಾಡಿ, 2016ರಲ್ಲಿ ತೋಟಗಾರಿಕೆ ಉತ್ಪನ್ನ ಹಾಗೂ ಸಾಮಾಜಿಕ ಅರಣ್ಯೀಕರಣ ಗಿಡಗಳನ್ನು ನಾಟಿ ಮಾಡಿದ್ದಾರೆ.
ಲಿಂಬೆ 200, ಮಾವು 650, ನೇರಳೆ 150, ಪೇರಲ 1,300, ಸೀತಾಫಲ 100, ಸಪೋಟಾ 60, ನುಗ್ಗೆ 1000, 650 ಹೆಬ್ಬೇವು, 50 ತೆಂಗು, ಕರಿಬೇವು 100, ರಕ್ತಚಂದನ 350 ಹಾಗೂ ಶ್ರೀಗಂಧದ 450 ಗಿಡಗಳಿವೆ. ಇದಕ್ಕಾಗಿ ಇದುವರೆಗೆ ಸುಮಾರು 20 ಲಕ್ಷ ರೂ. ವ್ಯಯಿಸಿದ್ದಾರೆ. ಸಂಪೂರ್ಣ ಸಾವಯವ, ಸಹಜ ಕೃಷಿ ಪದ್ಧತಿಯ ಸಮಗ್ರ ಕೃಷಿ ತೋಟಗಾರಿಕೆ ಗಿಡಗಳನ್ನು ವೈಜ್ಞಾನಿಕ ಅಂತರದಲ್ಲಿ ನಾಟಿ ಮಾಡಿದ್ದಾರೆ. ಗಿಡವೊಂದರ ಅಕ್ಕಪಕ್ಕ ಅನ್ಯ ಜಾತಿಯ ಗಿಡಗಳಿದ್ದು, ದ್ಯುತಿಸಂಶ್ಲೇಷಣೆ ಕ್ರಿಯೆಗೆ ಪೂರಕ ವಾತವರಣವನ್ನು ತಮ್ಮದೇ ತಾಂತ್ರಿಕ ವಿವೇಚನೆಯಲ್ಲಿ ಅಳವಡಿಸಿಕೊಂಡು, ತೋಟಗಾರಿಕೆ ತಜ್ಞರಿಂದ ಸೈ ಎನಿಸಿಕೊಂಡಿದ್ದಾರೆ.
ಸೀಜನ್ವಾರು ನಿರೀಕ್ಷಿತ ಇಳುವರಿ ಲೆಕ್ಕಚಾರದೊಂದಿಗೆ ಉತ್ಪನ್ನಗಳ ನಿರೀಕ್ಷೆಯಲ್ಲಿರುವ ರುದ್ರಗೌಡ ಇತರ ರೈತರಿಗೆ ಮಾದರಿಯಾಗಿದ್ದಾರೆ. ಒಂದು ಬೆಳೆಯನ್ನು ನಂಬಿ ಕೃಷಿ ಮಾಡುವುದು ಸೂಕ್ತ ಬೇಸಾಯವಲ್ಲ. ಬಹು ಬೆಳೆ ಪದ್ಧತಿಯನ್ನು ವೈಜ್ಞಾನಿಕವಾಗಿ ವಿಂಗಡಣೆ ಮಾಡಿ, ಬಹು ಬೆಳೆ ಮಾಡಿದರೆ ನಷ್ಟವಿಲ್ಲ ಎನ್ನುವುದಕ್ಕೆ ರುದ್ರಗೌಡ ಗೌಡಪ್ಪನವರ್ ನಿದರ್ಶನವಾಗಿದ್ದಾರೆ.