ಗಂಗಾವತಿ: ಮಾಜಿ ಸಂಸದ ಹಾಗೂ ಇತ್ತೀಚೆಗಷ್ಟೆ ಬಿಜೆಪಿ ಸೇರಿರುವ ಕೆ.ವಿರೂಪಾಕ್ಷಪ್ಪ ಒಂದು ತರ ಹಾರುವ ಪಕ್ಷಿಯಿದ್ದಂತೆ. ಸದಾ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹಾರುತ್ತಲೇ ಇರುತ್ತಾರೆ. ಇಂತವರಿಗೆ ಮಹತ್ವ ಕೊಡುವ ಅಗತ್ಯವಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ ವ್ಯಂಗ್ಯವಾಡಿದರು.
ಮಸ್ಕಿ ವಿಧಾನಸಭಾ ಚುನಾವಣೆ ಹಿನ್ನೆಲೆ ನಗರದ ಮೂಲಕ ಪ್ರಯಾಣಿಸುತ್ತಿದ್ದ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಕೆ.ವಿರೂಪಾಕ್ಷಪ್ಪ ಅವರು ಈ ಮೊದಲು ಕಾಂಗ್ರೆಸ್ ಪಕ್ಷದಲ್ಲಿದ್ದರು. ಬಳಿಕ ಬಿಎಸ್ಆರ್, ಬಿಜೆಪಿ, ಕಾಂಗ್ರೆಸ್ ಮತ್ತೀಗ ಬಿಜೆಪಿ ಸೇರಿದ್ದಾರೆ. ಹಾರುವ ಸಿದ್ಧಾಂತಕ್ಕೆ ಹೆಚ್ಚು ಅವಲಂಬಿತರಾಗುತ್ತಿದ್ದಾರೆ. ಹೀಗಾಗಿ ಜನ ಮನ್ನಣೆ ಕಳೆದುಕೊಂಡ ರಾಜಕಾರಣಿಯಾಗಿದ್ದರಿಂದ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಹಾನಿ ಇಲ್ಲ ಎಂದರು.
ಇನ್ನು ಮಸ್ಕಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರವಿಹಾಳ ಗೆಲಲ್ಲಿದ್ದಾರೆ. ಬಸವನಗೌಡರ ಕುಟುಂಬಿಕರು ಮೂಲತಃ ಕಾಂಗ್ರೆಸ್ಸಿಗರು, ಅಲ್ಲದೇ ಈಗಾಗಲೇ ಕ್ಷೇತ್ರದಲ್ಲಿ ಜನರ ವಿಶ್ವಾಸ ಗಳಿಸಿಕೊಂಡಿದ್ದಾರೆ. ಕೆ.ವಿರೂಪಾಕ್ಷಪ್ಪ ಸ್ವಾರ್ಥಕ್ಕಾಗಿ ಕ್ಷೇತ್ರದ ಹಿತಾಸಕ್ತಿ ಬಲಿಕೊಟ್ಟಿದ್ದಾರೆ ಎಂದು ಧ್ರುವ ನಾರಾಯಣ ಆರೋಪಿಸಿದರು.