ಕೊಪ್ಪಳ: ದೇವದಾಸಿ ಮಹಿಳೆಯರಿಗೆ ಸರ್ಕಾರ ಪುನರ್ವಸತಿ ಕಲ್ಪಿಸುತ್ತಿದ್ದರೂ ಅನೇಕರು ಸೌಲಭ್ಯವಂಚಿತರಾಗಿದ್ದಾರೆ. ಸರ್ಕಾರ ನಡೆಸಿದ ಸರ್ವೆಯಲ್ಲಿ ಇವರ ಹೆಸರುಗಳು ಬಿಟ್ಟು ಹೋಗಿರುವುದೇ ಇದಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ. ಹೀಗೆ ಸರ್ವೆಯಲ್ಲಿ ಬಿಟ್ಟು ಹೋಗಿರುವ ದೇವದಾಸಿ ಮಹಿಳೆಯರನ್ನು ಪಟ್ಟಿಯಲ್ಲಿ ಸೇರ್ಪಡೆ ಮಾಡಲು ಮರು ಸಮೀಕ್ಷೆ ನಡೆಸಬೇಕು ಎಂಬ ಒತ್ತಾಯ ಮತ್ತೆ ಕೇಳಿಬಂದಿದೆ.
ಮರುಸಮೀಕ್ಷೆಗೆ ಒತ್ತಾಯ: 1993-94ರಲ್ಲಿ ಒಂದು ಬಾರಿ ದೇವದಾಸಿ ಮಹಿಳೆಯರ ಸಮೀಕ್ಷೆ ಮಾಡಲಾಗಿತ್ತು. ಆಗ ಬಹಳಷ್ಟು ಜನರನ್ನು ವಿವಿಧ ಕಾರಣಗಳಿಂದಾಗಿ ಸಮೀಕ್ಷೆಯಿಂದ ಕೈಬಿಡಲಾಗಿದೆ. ಮತ್ತೆ ದೇವದಾಸಿ ಮಹಿಳೆಯರು ಮರುಸಮೀಕ್ಷೆ ಮಾಡಬೇಕೆಂದು ಒತ್ತಾಯಿಸಿದ್ದರಿಂದ 2007-08 ರಲ್ಲಿ ಸರ್ಕಾರ ಮರು ಸಮೀಕ್ಷೆ ನಡೆಸಿತು. ಆ ಸಂದರ್ಭದಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರು ದೇವದಾಸಿಯರು ಇರುವುದು ಪತ್ತೆಯಾಗಿತ್ತು. ಆದರೂ ಈ ಸಮಿಕ್ಷೆ ಪೂರ್ಣವಾಗಿಲ್ಲ ಎಂದು ಪ್ರತಿಭಟನಾನಿರತರು ದೂರಿದರು.
ಶಿಕ್ಷಣ, ಉದ್ಯೋಗ ದಾಖಲಾತಿಗೆ ತೊಂದರೆ: ದೇವದಾಸಿ ಪದ್ದತಿಯಿಂದ ವಿಮುಕ್ತರಾಗಿರುವ ಮಹಿಳೆಯರಿಗೆ ಸರ್ಕಾರದಿಂದ ಪ್ರಮಾಣ ಪತ್ರ ನೀಡಿ ಅವರಿಗೆ ಮಾಸಾಶನ, ಸಾಲ ಸೌಲಭ್ಯ, ವಸತಿ ಹಾಗೂ ಭೂಮಿ ನೀಡಲಾಗುತ್ತಿದೆ. ಇದರ ಜೊತೆಗೆ ಮಕ್ಕಳಿಗೆ ಶಿಕ್ಷಣ, ಉದ್ಯೋಗ ನೀಡುವಾಗ ಮಕ್ಕಳ ದಾಖಲಾತಿಯಲ್ಲಿ ತಂದೆಯ ಹೆಸರಿನ ಬದಲಾಗಿ ತಾಯಿ ಹೆಸರು ಬರೆಸುತ್ತಾರೆ. ಆಗ ಅವರು ತಮ್ಮ ತಾಯಿ ದೇವದಾಸಿ ಎಂಬ ಪ್ರಮಾಣ ಪತ್ರ ನೀಡಬೇಕು.
ಆದರೆ ದೇವದಾಸಿ ಸಮೀಕ್ಷೆಯ ಪಟ್ಟಿಯಲ್ಲಿ ಹೆಸರು ಇಲ್ಲದವರಿಗೆ ಸರ್ಕಾರದಿಂದ ಯಾವುದೇ ಸೌಲಭ್ಯ ನೀಡುವುದಿಲ್ಲ. ಅವರು ಮಕ್ಕಳಿಗೆ ಸೌಲಭ್ಯ ನೀಡುತ್ತಿಲ್ಲ. ಶಿಕ್ಷಣ ಹಾಗೂ ಉದ್ಯೋಗದಲ್ಲಿ ದಾಖಲಾತಿಗೆ ತೊಂದರೆಯಾಗಿದೆ. ಇದೇ ಕಾರಣಕ್ಕೆ ಸರ್ಕಾರ ಮತ್ತೊಮ್ಮೆ ದೇವದಾಸಿಯರ ಸಮೀಕ್ಷೆ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಮಾಸಾಶನ ಹೆಚ್ಚಿಸಲು ಮನವಿ: ದೇವದಾಸಿಯರ ಮಕ್ಕಳನ್ನು ಬೇರೆಯವರು ಮದುವೆಯಾದರೆ ಸಮಾಜ ಕಲ್ಯಾಣ ಇಲಾಖೆಯಿಂದ 3-5 ಲಕ್ಷ ರೂಪಾಯಿ ಪ್ರೋತ್ಸಾಹಧನ ನೀಡುತ್ತಾರೆ. ದೇವದಾಸಿಯರ ಮಗ ಮತ್ತು ಮಗಳು ಮದುವೆಯಾದರೆ ಅವರ ಪ್ರೋತ್ಸಾಹಧನ ನೀಡುವುದಿಲ್ಲ. ಈಗ ನೀಡುತ್ತಿರುವ ಮಾಸಾಶನ ತೀರಾ ಕಡಿಮೆಯಾಗಿದೆ. ಮಾಸಾಶನ ಹೆಚ್ಚಿಸಬೇಕು, ದೇವದಾಸಿಯರಿಗೆ ವಸತಿ ಹಾಗೂ ಭೂಮಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.