ಗಂಗಾವತಿ: ಇತ್ತೀಚೆಗೆ ಸುರಿದ ಧಾರಾಕಾರ ಮಳೆ, ಆಲಿಕಲ್ಲು ಸಹಿತ ಬಿರುಗಾಳಿಯಿಂದ ನಷ್ಟಕ್ಕೀಡಾದ ಭತ್ತದ ಬೆಳೆಗೆ ಪ್ರಾಕೃತಿಕ ವಿಕೋಪದಡಿ ಪರಿಹಾರ ಕಲ್ಪಿಸಲಾಗುವುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.
ಈ ಬಗ್ಗೆ ಕನಕಗಿರಿ, ಕಾರಟಗಿ ಮತ್ತು ಗಂಗಾವತಿ ತಾಲೂಕಿನ ಆಯ್ದ ಗ್ರಾಮಗಳಿಗೆ ಭೇಟಿ ನೀಡಿ ಭತ್ತದ ಬೆಳೆ ಹಾನಿಯಾಗಿರುವ ಬಗ್ಗೆ ಪರಿಶೀಲನೆ ನಡೆಸಿದರು.
ಬಳಿಕ ಬಸವಪಟ್ಟಣ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಪರಿಶೀಲಿಸಿದಂತೆ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ನೀಡಿರುವ ಪ್ರಾಥಮಿಕ ಮಾಹಿತಿಯಂತೆ ಮೂರು ತಾಲೂಕುಗಳಲ್ಲಿ ಸುಮಾರು 75 ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿನ ಭತ್ತ ಹಾನಿಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಇನ್ನೊಂದು ವಾರದಲ್ಲಿ ಭತ್ತದ ಬೆಳೆ ಕಟಾವಿಗೆ ಬರುತಿತ್ತು. ದುರಾದೃಷ್ಟ ವಶಾತ್ ಮಳೆ ಸುರಿದು ಅಪಾರ ಪ್ರಮಾಣದ ಹಾನಿಯಾಗಿದೆ. ಈ ಬಗ್ಗೆ ಸಿಎಂ ಜೊತೆಯೂ ಚರ್ಚಿಸಿ ಆದಷ್ಟು ತ್ವರಿತವಾಗಿ ರೈತರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.