ಕೊಪ್ಪಳ: ಬಿಸಿಯೂಟ ತಯಾರಕ ನೌಕರರ ಬಾಕಿ ವೇತನ ಬ್ಯಾಂಕ್ ಖಾತೆಗೆ ಜಮೆ ಮಾಡುವಂತೆ ಜಿಲ್ಲಾಡಳಿತ ಭವನಕ್ಕೆ ಆಗಮಿಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.
ಅತ್ಯಂತ ಕಡಿಮೆ ಸಂಬಳದಲ್ಲಿ ಸುಮಾರು ವರ್ಷಗಳಿಂದ ಬಿಸಿಯೂಟ ತಯಾರಿಕ ಕೆಲಸ ಮಾಡುತ್ತಿದ್ದೇವೆ. ಕಳೆದ ಆರು ತಿಂಗಳ ವೇತನ ಬರಬೇಕಿದೆ. ಈಗ ಸರ್ಕಾರ ಮೂರು ತಿಂಗಳ ವೇತನ ಬಿಡುಗಡೆ ಮಾಡಿದೆ. ಆದರೆ ಜಿಲ್ಲೆಯಲ್ಲಿ ಬಿಸಿಯೂಟ ತಯಾರಕ ಸಿಬ್ಬಂದಿಗೆ ವೇತನಕ್ಕೆ ಸಂಬಂಧಿಸಿದ ಅಧಿಕಾರಿಗಳು ನಮ್ಮ ಖಾತೆಗೆ ಹಣ ಜಮೆ ಮಾಡಿಲ್ಲ. ಇದರಿಂದಾಗಿ ನಮಗೆ ತೊಂದರೆಯಾಗಿದೆ ಎಂದು ಆರೋಪಿಸಿದ್ದಾರೆ.
ಕೊರೊನಾದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಬಿಸಿಯೂಟ ತಯಾರಿಕಾ ಮಹಿಳೆಯರಿಗೆ ಐದು ಸಾವಿರ ರೂಪಾಯಿ ಪರಿಹಾರ ಧನ, ಕನಿಷ್ಠ ವೇತನ, ಸಮವಸ್ತ್ರ, ನಿವೃತ್ತಿ ಬಳಿಕ ಪಿಂಚಣಿ ಸೇರಿದಂತೆ ಇನ್ನಿತರೆ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಬಿಸಿಯೂಟ ತಯಾರಕ ಮಹಿಳೆಯರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.