ಕುಷ್ಟಗಿ (ಕೊಪ್ಪಳ): ಕರ್ನಾಟಕ ಲಿಂಗಾಯತ ಮಠದ ಇತಿಹಾಸದದಲ್ಲಿ ಧರ್ಮ ಪ್ರಸಾರಕ್ಕಾಗಿ, ಜಾತ್ರಾ ಮಹೋತ್ಸವ ನಿಮಿತ್ತ ಪಾದಯಾತ್ರೆಗಳಾಗಿವೆ. ಆದರೆ ಜನಾಂಗದ ಹಿತರಕ್ಷಣೆಗಾಗಿ ಸರ್ಕಾರದಿಂದ ಮೀಸಲಾತಿ ಕಲ್ಪಿಸಲು ಯಾವುದೇ ಲಿಂಗಾಯತ ಮಠಗಳು ಪಾದಯಾತ್ರೆ ಮಾಡಿರುವ ಉದಾಹರಣೆಯೇ ಇಲ್ಲ. ಆ ರೀತಿ ಪಾದಯಾತ್ರೆ ನಡೆಸುವ ಮೊದಲ ಸಮಾಜ ಪಂಚಮಸಾಲಿಯಾಗಲಿದೆ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಕುಷ್ಟಗಿಯಲ್ಲಿ ಸೋಮವಾರ ರಾತ್ರಿ ಶ್ರೀ ಮಲ್ಲಿಕಾರ್ಜುನ ದಾಸೋಹ ಭವನದಲ್ಲಿ ಪಂಚಮಸಾಲಿಗಳ ನಡಿಗೆ ವಿಧಾನಸೌಧದ ಒಳಗೆ ಬೃಹತ್ ಪಾದಯಾತ್ರೆಯ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಪಂಚಮಸಾಲಿ ಸಮಾಜದ ವಿಶಾಲಭಾವನೆ ಹಿನ್ನೆಲೆ, 2-ಎ ಮೀಸಲಾತಿಯಿಂದ ಹಿನ್ನಡೆಯಾಗಿದೆ. ಇದೀಗ ನಮ್ಮ ಸಮಾಜದಲ್ಲಿ ಬಡ ವರ್ಗದವರಿದ್ದು, ವಿದ್ಯಾವಂತರಿರುವ ಹಿನ್ನೆಲೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮೀಸಲಾತಿ ಅಗತ್ಯವಿದೆ. ಈಗಾಗಲೇ ನಮ್ಮ ಸಹೋದರ ಸಮಾಜ ವಾಲ್ಮೀಕಿ ಸಮಾಜವು ಮೀಸಲಾತಿ ಶೇ.7.5 ಹೆಚ್ಚಳಕ್ಕಾಗಿ, ಹಾಲುಮತ (ಕುರುಬ) ಸಮಾಜ ಎಸ್ಟಿ ಮೀಸಲಾತಿಗಾಗಿ ಹೋರಾಟ ನಡೆಸುತ್ತಿದೆ. ಕುರುಬ ಸಮಾಜ 2-ಎ ಮೀಸಲಾತಿಯಿಂದ ಎಸ್ಟಿ ಮೀಸಲಾತಿ ಲಭಿಸಿದರೆ, ತೆರವಾಗುವ ಸ್ಥಾನದಲ್ಲಿ ಪಂಚಮಸಾಲಿ ಸಮಾಜಕ್ಕೆ 2-ಎ ಸಿಗುವ ವಿಶ್ವಾಸವಿದೆ ಎಂದ ಅವರು ಒಕ್ಕಲಿಗೆ ಸಮಾಜವೂ ಬಲಾಢ್ಯ ಸಮಾಜವಾಗಿದ್ದರೂ ದೇವೇಗೌಡರು ಸಿಎಂ ಆಗಿದ್ದಾಗ ಹೋರಾಟದ ಮೂಲಕ 3-ಎ ಮೀಸಲಾತಿ ಪಡೆದುಕೊಂಡರು. ಮುಂದುವರಿದ ಒಕ್ಕಲಿಗ ಸಮಾಜಕ್ಕೆ ಮೀಸಲಾತಿ ಸಿಕ್ಕಿದೆ, ಮರಾಠ ಸಮಾಜಕ್ಕೆ ಮೀಸಲಾತಿ ಸಿಕ್ಕಿದ್ದು, ಪಂಚಮಸಾಲಿ ಸಮಾಜಕ್ಕೆ ನ್ಯಾಯಬದ್ಧ ಹಕ್ಕು ಕೊಟ್ಟರೆ ತಪ್ಪೇನೂ ಇಲ್ಲ ಎಂದರು.
ಈ ಸುದ್ದಿಯನ್ನೂ ಓದಿ: ಮೀಸಲಾತಿ ನೀಡಲು ನಿರ್ಣಯ ಕೈಗೊಳ್ಳದಿದ್ದರೆ ವಿಧಾನಸೌಧ ಮುತ್ತಿಗೆ: ಕೂಡಲಸಂಗಮ ಶ್ರೀ
ಪಂಚಮಸಾಲಿ ಸಮುದಾಯಕ್ಕೆ 2-ಎ ಮೀಸಲಾತಿಗಾಗಿ ಕೂಡಲಸಂಗಮ ಲಿಂಗಾಯತ ಪೀಠದಿಂದ ಬೆಂಗಳೂರು ವಿಧಾನಸೌಧದ ಆಡಳಿತ ಪೀಠದವರೆಗೆ ಪಾದಯಾತ್ರೆ ನಡೆಸಿ ಬಜೆಟ್ ಅಧಿವೇಶನ ವೇಳೆಗೆ ತಲುಪುವ ಗುರಿ ಹೊಂದಲಾಗಿದೆ. ಅಧಿವೇಶನ ನಂತರ ತಲುಪಿದರೆ ಖಾಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿದರೆ ಏನು ಪ್ರಯೋಜನ? ಎಂದು ಪ್ರಶ್ನಿಸಿದರು. ಹೀಗಾಗಿ ಅಧಿವೇಶನದ ಸಂಧರ್ಭದಲ್ಲಿಯೇ ತಲುಪಿ ಮುತ್ತಿಗೆ ಹಾಕಿದರೆ ಸರ್ಕಾರ ಕಣ್ತೆರೆಯಲು ಸಾಧ್ಯವಿದೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು.
ಜ. 14ರಂದು ಪಾದಯಾತ್ರೆ ಪ್ರಾರಂಭಗೊಳ್ಳಲಿದ್ದು, ಆರಂಭದ ದಿನವೇ ಪಂಚಮಸಾಲಿ ಸಮುದಾಯದ ಶಕ್ತಿ ಪ್ರದರ್ಶನವಾಗಲಿದೆ. ಅಷ್ಟರೊಳಗೆ ಸರ್ಕಾರ 2-ಎ ಮೀಸಲಾತಿ ನೀಡಿದರೆ ಅಲ್ಲಿಯೇ ವಿಜಯೋತ್ಸವ ಆಚರಿಸಲಾಗುವುದು. ಇಲ್ಲವಾದಲ್ಲಿ ಬೆಂಗಳೂರು ವಿದಾನಸೌಧದವರೆಗೂ ಪಾದಯಾತ್ರೆ ಅನಿವಾರ್ಯ ಎಂದರು.